ವೀರಾಜಪೇಟೆ, ಜೂ. 22: ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಳಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ತರಕಾರಿ ಗಳನ್ನು ಉಪಯೋಗಿಸುವದು ಒಳಿತು ಎಂದು ಧರ್ಮಸ್ಥಳ ಗ್ರಾಮಾ ಭಿವೃದ್ಧಿಯ ಯೋಜನಾಧಿಕಾರಿ ಸದಾಶಿವ ಗೌಡ ಹೇಳಿದರು.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಿವ್ಯಜೋತಿ ಜ್ಞಾನವಿಕಾಸ ಕೇಂದ್ರದ ವತಿಯಿಂದ ವೀರಾಜಪೇಟೆ ಸಮೀಪದ ಕೆದಮುಳ್ಳೂರು ದವಸ ಭಂಡಾರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘’ಪೌಷ್ಟಿಕ ಆಹಾರ ಮೇಳ’’ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸದಾಶಿವ ಗೌಡ ಅವರು ಮಾನಸಿಕ ಹಾಗೂ ದೈಹಿಕ ವಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನಹರಿಸ ಬೇಕಾಗಿದೆ.

ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಪಾರದರ್ಶ ಕತೆಯನ್ನು ಕಾಯ್ದು ಕೊಳ್ಳಬೇಕು. ಫಾಸ್ಟ್ ಫುಡ್‍ಗಳ ಬಳಕೆ ದೇಹಕ್ಕೆ ಹಿತವಲ್ಲ. ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥ ಗಳನ್ನು ಬಳಸುವ ಅಭ್ಯಾಸವನ್ನು ಹೆಚ್ಚು ಬೆಳೆಸಿಕೊಳ್ಳುವ ದರಿಂದ ಆರೋಗ್ಯವನ್ನು ರಕ್ಷಣೆ ಮಾಡಿ ಕೊಂಡು ಜ್ಞಾನ ಸಂಪಾದಿಸಿ ಕೊಳ್ಳುವದರೊಂದಿಗೆ ಉತ್ತಮ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿ.ಎಸ್.ಎಸ್.ಎನ್. ನಿರ್ದೇಶಕ ಚೋಟು ಬಿದ್ದಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೊಡಗಿನಲ್ಲಿ ಕಳೆದ 10 ವರ್ಷಗಳಿಂದಲೂ ಬಡತನ ರೇಖೆಗಿಂತ ಕೆಳಗಿರುವ ಸ್ವ ಸಹಾಯ ಸಂಘದ ಸದಸ್ಯರುಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಅಭಿವೃದ್ಧಿಯತ್ತ ಕೊಂಡೊಯ್ದಿ ರುವದು ಕಂಡು ಬಂದಿದೆ. ಬಡವರ ಏಳಿಗೆಗೂ ಇದು ಕಾರಣವಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪುತ್ತಮಕ್ಕಿ ಪ್ರಾಥಮಿಕ ಶಾಲಾ ಶಿಕ್ಷಕಿ ಜಯಶ್ರೀ ಮಾತನಾಡಿ, ಮಹಿಳೆಗೆ ಉತ್ತಮ ಶಿಕ್ಷಣ ದೊರೆತರೆ ಅವರ ಕುಟುಂಬವೇ ಅಭಿವೃದ್ಧಿಯತ್ತ ಸಾಗಲು ಸಾಧ್ಯ.

ಪೌಷ್ಟಿಕ ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮ. ಹಿತ ಮಿತವಾಗಿ ಆಹಾರ ಸಸ್ಯ ದಾನ್ಯಗಳನ್ನು ಸೇವಿಸಬೇಕು ಎಂದರು.

ಕೆದಮುಳ್ಳೂರು ಒಕ್ಕೂಟದ ಅಧ್ಯಕ್ಷೆ ಆಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೀರಾಜಪೇಟೆ ಆರೋಗ್ಯ ಕೇಂದ್ರದ ಮಾನಸಿಕ ತಜ್ಞ ಚಿಟ್ಟಿಯಪ್ಪ ಹೆಚ್.ಐ.ವಿ. ಸೊಂಕು ಕುರಿತು ಮಾತನಾಡಿ, ಹೆಚ್.ಐ.ವಿ. ಸೋಂಕಿತ ವ್ಯಕ್ತಿಯನ್ನು ಎಲ್ಲರಂತೆ ಸಮಾನವಾಗಿ ನೋಡಿಕೊಳ್ಳಬೇಕು ಎಂದು ಸೋಂಕಿನ ಕುರಿತು ಜಾಗೃತಿ ನೀಡಿದರು.

ವೇದಿಕೆಯಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಂತಿ, ಆರೋಗ್ಯ ಕಾರ್ಯಕರ್ತೆ ಲೀನಾ, ಪೊಲೀಸ್ ಸಿಬ್ಬಂದಿ ಗಿರೀಶ್ ಇತರರು ಉಪಸ್ಥಿತರಿದ್ದರು. ದಿವ್ಯ ಜೋತಿ ಜ್ಞಾನವಿಕಾಸ ಕೇಂದ್ರದ ಭವ್ಯ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸರಿತಾ ನಿರೂಪಿಸಿದರೆ, ಭಾರತಿ ವಂದಿಸಿದರು.

ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮದಲ್ಲಿ ಮಹಿಳೆಯರು ನೈಸರ್ಗಿಕವಾಗಿ ದೊರೆಯುವ ಸೊಪ್ಪು ತರಕಾರಿಗಳಿಂದ ತಯಾರಿಸಿದ್ದ ವಿವಿಧ ಖಾದ್ಯಗಳನ್ನು ಇಡಲಾಗಿತ್ತು.