ಸೋಮವಾರಪೇಟೆ, ಜೂ. 22: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದಿಂದ ರವೀಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ವಿಕಲಚೇತನರು ಮತ್ತು ವೃದ್ಧರಿಗೆ ಸಹಾಯ ಧನ ಹಾಗೂ ವಸ್ತ್ರಗಳನ್ನು ವಿತರಿಸಲಾಯಿತು.

ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಕಳೆದ 16 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುತ್ತಿರುವ ರವೀಂದ್ರ ಅವರು, ಬತ್ತಿ ಹೋಗಿದ್ದ ಆನೆಕೆರೆ ಮತ್ತು ಯಡೂರು ಕೆರೆಗಳನ್ನು ತಮ್ಮ ದುಡಿಮೆಯ ಹಣದಿಂದ ಹೂಳು ತೆಗೆಸುವ ಮೂಲಕ ಮರುಜೀವ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಕಲಚೇತನ ರಾದ ಕಾವೇರಿ, ವಸಂತ್, ಅನೀಫ್ ಬಾಬು, ಗಂಗಾಧರ್, ಗುರುವ ಅವರುಗಳಿಗೆ ವಸ್ತ್ರ ಹಾಗೂ ತಲಾ 1 ಸಾವಿರ ಸಹಾಯಧನ, ವೃದ್ಧರಾದ ಕಾಳಪ್ಪ ಮತ್ತು ಮಹಾಲಿಂಗಮ್ಮ ಅವರುಗಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ ಮೋಟಾರ್ ಯೂನಿಯನ್ ಅಧ್ಯಕ್ಷ ಭರತ್, ಉಪಾಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ರಂಗಸ್ವಾಮಿ, ಕರವೇ ಕಾರ್ಯದರ್ಶಿ ಹಸನಬ್ಬ, ಅಭಿಮಾನಿಗಳ ಸಂಘದ ಕರ್ಕಳ್ಳಿ ರವಿ, ಪದಾಧಿಕಾರಿಗಳಾದ ಪ್ರಕಾಶ್, ರಾಜಪ್ಪ, ಮೂರ್ತಿ, ಚನ್ನಯ್ಯ, ಮಣಿಕಂಠ, ಅಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.