ಸೋಮವಾರಪೇಟೆ, ಜೂ. 22: ಪುಷ್ಪಗಿರಿ ಬೆಟ್ಟಶ್ರೇಣಿಯ ಗುಡ್ಡಗಾಡು ಪ್ರದೇಶವಾಗಿರುವ ಶಾಂತಳ್ಳಿ ವ್ಯಾಪ್ತಿಯಲ್ಲಿ ವಸತಿ ಸಹಿತ ಶಿಕ್ಷಣ ಕೇಂದ್ರದ ಅಗತ್ಯತೆಯಿದ್ದು, ಸ್ಥಳೀಯರು ಕೈಜೋಡಿಸಿದ್ದಲ್ಲಿ ಅಂತಹ ಶಾಲೆ ನಿರ್ಮಾಣಕ್ಕೆ ಸಹಕಾರ ನೀಡಲಾಗುವದು ಎಂದು ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ತಿಳಿಸಿದರು.ಬೆಟ್ಟದಳ್ಳಿಯ ಶ್ರೀ ಕುಮಾರಲಿಂಗೇಶ್ವರ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಟ್ಟದಳ್ಳಿಯಲ್ಲಿ ಈಗಾಗಲೇ ಶ್ರೀಕುಮಾರಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆಯನ್ನು ಸರ್ವರ ಸಹಕಾರದಿಂದ ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸೌಕರ್ಯಗಳನ್ನು ಒಳಗೊಂಡಂತೆ ವಸತಿ ಶಾಲೆ ಸ್ಥಾಪಿಸಲು ಪ್ರಯತ್ನಿಸಲಾಗುವದು ಎಂದರು.ಕುಮಾರಲಿಂಗೇಶ್ವರ ಶಾಲೆಯಲ್ಲಿ ಓದಿದ ಅನೇಕರು ಇಂದು ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಉತ್ತಮ ಭವಿಷ್ಯ ಕಟ್ಟಿಕೊಂಡಿದ್ದಾರೆ ಎಂದ ಅವರು, ಶಾಂತಳ್ಳಿ ವ್ಯಾಪ್ತಿಯ ಪೋಷಕರು ತಮ್ಮ ಮಕ್ಕಳನ್ನು ದೂರದ ಊರುಗಳಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಬೇಕಾದ ಪರಿಸ್ಥಿತಿಯನ್ನು ಮನಗಂಡು ಬೆಟ್ಟದಳ್ಳಿಯಲ್ಲಿಯೇ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೂ ಆಂಗ್ಲಮಾಧ್ಯಮದ ಶಿಕ್ಷಣ ಒದಗಿಸಲಾಗುತ್ತಿದೆ. ಶಾಲೆಗಳ ಉಳಿವಿಗೆ ಪೋಷಕರೂ ಸಹ ಕೈಜೋಡಿಸಬೇಕು ಎಂದರು.ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮೆಡಿಕಲ್, ನರ್ಸಿಂಗ್, ಇಂಜಿನಿಯರಿಂಗ್ ಕೇಂದ್ರ ಸ್ಥಾಪನೆಯ ಅಗತ್ಯವಿದೆ. ಇದರೊಂದಿಗೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆಯೂ ಹೆಚ್ಚಿದೆ ಎಂದ ರವೀಂದ್ರ ಅವರು, ಗ್ರಾಮೀಣ ಭಾಗದ ಶಾಲೆಗಳು ಉಳಿದರೆ ಮಾತ್ರ ಗ್ರಾಮಗಳು ಉದ್ದಾರವಾಗುತ್ತವೆ ಎಂದು ಅಭಿಪ್ರಾಯಿಸಿದರು.
(ಮೊದಲ ಪುಟದಿಂದ) ಉದ್ಯಮಿ ಗಿರೀಶ್ ಮಲ್ಲಪ್ಪ ಮಾತನಾಡಿ, ಕಳೆದ ವರ್ಷ ಎದುರಾದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಈ ಭಾಗದ ಮಂದಿ ಯಾವದೇ ಹೋರಾಟವನ್ನು ಮಾಡದ ಹಿನ್ನೆಲೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿದ್ದರೂ ಸಂತ್ರಸ್ತ ರೈತರಿಗೆ ಲಭಿಸುತ್ತಿಲ್ಲ. ಸೌಲಭ್ಯಗಳಿಗಾಗಿ ಹೋರಾಟ ರೂಪಿಸದ ಹೊರತು ಯಾವದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುವದಿಲ್ಲ ಎಂದರು.
ಶಾಂತಳ್ಳಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಆಂಗ್ಲಮಾಧ್ಯಮ ಶಾಲೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವದು. ಗ್ರಾಮೀಣ ಭಾಗದ ಎಲ್ಲಾ ಮಕ್ಕಳೂ ಉತ್ತಮ ಶಿಕ್ಷಣವನ್ನು ಹೊಂದಿಕೊಳ್ಳುವ ಮೂಲಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶ್ರೀಕುಮಾರಲಿಂಗೇಶ್ವರ ಪೂರ್ವ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂಗಪ್ಪ, ಪ್ರೌಢಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಂದರ್,