ಗೋಣಿಕೊಪ್ಪ ವರದಿ, ಜೂ. 22 : ಗೋಣಿಕೊಪ್ಪ ಪಟ್ಟಣದ ಕಸ ಸಮಸ್ಯೆ ಹಾಗೂ ಶಾಶ್ವತ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಪಟ್ಟಣದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಗೋಣಿಕೊಪ್ಪಲು ಅಭಿವೃಧ್ಧಿ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. ವೀರಾಜಪೇಟೆ ತಾಲೂಕು ಪತ್ರ ಕರ್ತರ ಸಂಘ ಹಾಗೂ ಗೋಣಿ ಕೊಪ್ಪಲು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ವಿವಿಧ ಸಂಘ- ಸಂಸ್ಥೆಗಳ ಪ್ರಮುಖರುಗಳು, ಗ್ರಾಮ ಪಂಚಾಯ್ತಿ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಅಭಿವೃಧ್ಧಿ ಸಮಿತಿ ಅಸ್ತಿತ್ವಕ್ಕೆ ತರುವ ಮೂಲಕ ಹೋರಾಟ ನಡೆಸುವಂತೆ ನಿರ್ಧಾರ ತೆಗೆದು ಕೊಳ್ಳಲಾಯಿತು.ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಮೌಳಿ, ಅಧ್ಯಕ್ಷೆ ಸೆಲ್ವಿ, ತಾ.ಪಂ, ಉಪಾಧ್ಯಕ್ಷ ನೆಲ್ಲೀರ ಚಲನ್ ಸೇರಿದಂತೆ ಪಟ್ಟಣದ ಸಂಘ-ಸಂಸ್ಥೆಗಳ ಪ್ರಮುಖರುಗಳು ಪಾಲ್ಗೊಂಡು ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸು ವದಾಗಿ ತಿಳಿಸಿದರು.
ಅಭಿವೃದ್ಧಿ ಸಮಿತಿ ಸಭೆಯಲ್ಲಿ ಸಮಿತಿಯ ರೂಪುರೇಷೆ ಹಾಗೂ ಸಮಿತಿಗೆ ಹೆಚ್ಚುವರಿ ಸದಸ್ಯರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಸ್ಥಳೀಯ ಆಡಳಿತ ಹಾಗೂ ಸರ್ಕಾರದ ಗಮನ ಸೆಳೆಯುವದರ ಮೂಲಕ ಸಮಸ್ಯೆ ಪರಿಹರಿಸಲು ಹಾಗೂ ಅಭಿವೃದ್ಧಿ ಕಾರ್ಯ ಅನುಷ್ಠಾನಕ್ಕೆ ಪಕ್ಷಾತೀತ, ಜಾತಿ- ಧರ್ಮ ರಹಿತವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂವಾದದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ನಿರಾಸಕ್ತಿಯೇ ಕಸ ಸಮಸ್ಯೆ ಉಲ್ಭಣಿಸಲು ಕಾರಣ ಎಂಬ ಆರೋಪ ವ್ಯಕ್ತವಾಯಿತು. ಪಂಚಾಯ್ತಿ ಅಭಿವೃಧ್ಧಿ ಅಧಿಕಾರಿ ಹಾಗೂ ಅಧ್ಯಕ್ಷೆ ಸೆಲ್ವಿ ಅವರು ಹೆಚ್ಚು ಕಾಳಜಿ ವಹಿಸಿ ಸಮಸ್ಯೆ ನಿಭಾಯಿಸಬೇಕಿತ್ತು. ಕಸ ಸಮಸ್ಯೆ ಸಾರ್ವಜನಿಕ ಸಮಸ್ಯೆಯಾಗಿ ತೊಂದರೆಯಾಗುತ್ತಿದೆ ಎಂದು ಪ್ರಮುಖರುಗಳು ಆರೋಪಿಸಿದರು.