ಶ್ರೀಮಂಗಲ, ಜೂ. 22: ಕೊಡಗು ಜಿಲ್ಲೆಯ ಮೂರು ತಾಲೂಕುಗಳು ಅನಾವೃಷ್ಟಿಗೆ ತುತ್ತಾಗಿ ಜಿಲ್ಲೆಯನ್ನು ಸರಕಾರ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ಸರಕಾರದಿಂದ ರೈತರು ಹಾಗೂ ಬೆಳೆಗಾರರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಸಂಬಂಧಿಸಿದ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು.

ಗೋಣಿಕೊಪ್ಪಲು ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕಾಫಿ, ಕರಿಮೆಣಸು ಫಸಲಿನ ಮೇಲೆ ದುಷ್ಪರಿಣಾಮ ಬೀರಿದೆ. 2018 ಅಕ್ಟೋಬರ್‍ನಿಂದ 2019 ಏಪ್ರಿಲ್‍ವರೆಗೆ ಮಳೆ ಇಲ್ಲದೆ ಬೆಳೆಗಾರರಿಗೆ ನಷ್ಟವಾಗಿದೆ. ಇದಲ್ಲದೆ 2018ರ ಜೂನ್‍ನಿಂದ ಸೆಪ್ಟೆಂಬರ್ ವರೆಗೆ ತೀವ್ರ ಮಳೆಯಿಂದ ಅತಿವೃಷ್ಟಿಗೆ ತುತ್ತಾಗಿದ್ದು, ಅದರಿಂದಲೂ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಒಂದೇ ವರ್ಷದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಜಿಲ್ಲೆಂiÀi ರೈತ ಸಮುದಾಯ ತತ್ತರಿಸಿದ್ದು, ಈ ನಿಟ್ಟಿನಲ್ಲಿ ಪ್ರತಿ ಬೆಳೆಗಾರರು ವೈಯಕ್ತಿಕವಾಗಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವದರ ಬದಲು ಸಮಗ್ರ ಜಿಲ್ಲೆಯ ಎಲ್ಲಾ ಬೆಳೆಗಾರರಿಗೂ ಅವರ ಬೆಳೆ ಹಾಗೂ ಜಾಗದ ದಾಖಲಾತಿಯ ವಿವರ ಕಂದಾಯ ಇಲಾಖೆಯಲ್ಲಿರುವದರಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಲು ನಿರ್ಧರಿಸಲಾಯಿತು.

2018ರ ಅತಿವೃಷ್ಟಿಗೆ ತುತ್ತಾಗಿ ಬೆಳೆ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡಿ ರುವ ಬೆಳೆಗಾರರಿಗೆ ಪರಿಹಾರ ಇನ್ನೂ ಬಾಕಿ ಇದ್ದು, ಈ ಬಗ್ಗೆ ತಿಳಿದುಕೊಳ್ಳಲು ಪ್ರತಿ ಹೋಬಳಿಯ ಕಂದಾಯ ಪರಿವೀಕ್ಷಕರ ಕಚೇರಿಯಲ್ಲಿ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮಾಹಿತಿ ಪಡೆಯುವದು ರೈತರಿಗೆ ಕಷ್ಟವಾಗಲಿದೆ. ಈ ಸಂಬಂಧ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ನೂತನ ಸಂಸದ ಪ್ರತಾಪ್ ಸಿಂಹ ಅವರನ್ನು ಈಗಾಗಲೇ ಒಕ್ಕೂಟ ನಿಯೋಗವು ಭೇಟಿ ಮಾಡಿ ಜಿಲ್ಲೆಯ ಬೆಳೆಗಾರರ ಸಮಸ್ಯೆಯ ಬಗ್ಗೆ ಗಮನ ಸೆಳೆದು ಪರಿಹಾರಕ್ಕೆ ಸೂಕ್ತ ಸಲಹೆಯನ್ನು ನೀಡಿದೆ. ಈ ಬಗ್ಗೆ ಸಂಸದರು ಗಂಭೀರವಾಗಿ ಪರಿಶೀಲಿಸಿ ಬೆಳೆಗಾರರ ನೆರವಿಗೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿರುವ ದಾಗಿ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಸಲಹೆಗಾರ ಚೆಪ್ಪುಡೀರ ಶರಿಸುಬ್ಬಯ್ಯ, ಪ್ರಮುಖರಾದ ಚೆಪ್ಪುಡೀರ ಹ್ಯಾರಿ ದೇವಯ್ಯ, ಕೋಟ್ರ್ರಮಾಡ ಅರುಣ್ ಅಪ್ಪಣ್ಣ, ಆದೇಂಗಡ ಆಶೋಕ್, ನಿವೃತ್ತ ವಿಂಗ್ ಕಮಾಂಡರ್ ಚೇಂದಿರ ಅಪ್ಪಣ್ಣ, ಸುಮಿತಾ ಅಪ್ಪಣ್ಣ, ಕರ್ತಮಾಡ ಸುನಂದ, ಕಾಳಿಮಾಡ ರಶಿಕ, ಅಣ್ಣಳಮಾಡ ಲಾಲ ಅಪ್ಪಣ್ಣ, ಕೋದಂಡ ಸನ್ನು ಉತ್ತಪ್ಪ, ಎ.ಬಿ. ಮುತ್ತಣ್ಣ, ಮಂಡಂಗಡ ಆಶೋಕ್ ಮಾಚಯ್ಯ, ಮಿದೇರಿರ ಕವಿತ ಮಾತನಾಡಿದರು.