ಮೈಸೂರು, ಜೂ. 22: ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಬರೆದ “ಕೊಡಗಿನ ತಲ್ಲಣ, ದುರಂತದ ಹಿಂದಿನ ಸತ್ಯಗಳು” ಕೃತಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಯುಕ್ತ ಪ್ರಕಾಶನದ ಆಶ್ರಯದಲ್ಲಿ ತಾ. 23 ರಂದು (ಇಂದು) ಬಿಡುಗಡೆಯಾಗಲಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಲಿದ್ದು, ‘ವಿಜಯ ಕರ್ನಾಟಕ’ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಕೃತಿ ಬಿಡುಗಡೆ ಮಾಡಲಿದ್ದಾರೆ. ವನ್ಯಜೀವಿ ಛಾಯಾಗ್ರಾಹ್ರಕ ಕೃಪಾಕರ ಸೇನಾನಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಬೆಸೂರು ಮೋಹನ ಪಾಳೇಗಾರ ಕೃತಿ ಕುರಿತು ಮಾತನಾಡಲಿದ್ದಾರೆ. ಯುಕ್ತ ಪ್ರಕಾಶನದ ಓಂಕಾರಪ್ಪ ಉಪಸ್ಥಿತರಿರುತ್ತಾರೆ.

ಇದು ರಮೇಶ್ ಉತ್ತಪ್ಪ ಅವರ 23ನೇ ಕೃತಿ. ಕೊಡಗಿನ ದುರಂತಕ್ಕೆ ಒಂದು ವರ್ಷವಾಗುತ್ತಾ ಬರುತ್ತಿದೆ. ಆದರೆ, ಅಂದಿನ ದುರಂತಕ್ಕೆ ನಿಜವಾದ ಕಾರಣಗಳ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಇದರಲ್ಲಿ ಕೆಲವು ಮುಚ್ಚಿಟ್ಟ ಸತ್ಯಗಳಿವೆ. ದುರಂತದ ಸಂದರ್ಭ ಕೊಡಗಿನಲ್ಲಿದ್ದು, ಕಣ್ಣಾರೆ ಕಂಡಿರುವ ಲೇಖಕರು ಹಲವು ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಕೇವಲ ಅಂದಿನ ಘಟನೆಯ ಚಿತ್ರಣ ಮಾತ್ರವಲ್ಲದೆ ಇದೊಂದು ಅಧ್ಯಯನ ಕೃತಿಯಾಗಿದೆ.