ಮಡಿಕೇರಿ, ಜೂ. 22: ಮಳೆಯ ಪ್ರಮಾಣ ಹೆಚ್ಚಾದರೆ ಈಗಾಗಲೇ ಗುರುತಿಸಲ್ಪಟ್ಟಿರುವ ಸೂಕ್ಷ್ಮ ಪ್ರದೇಶಗಳ ಗ್ರಾಮಸ್ಥರು ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿವಿಧ ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ನೋಡಲ್ ಅಧಿಕಾರಿಗಳು ಅಗತ್ಯ ಮಾಹಿತಿಗಳನ್ನು ನೀಡುತ್ತಿದ್ದಾರೆ.

ಕರ್ಣಂಗೇರಿಯ ವಿವಿಧ ಭಾಗಗಳಿಗೆ ಭೇಟಿ ನೀಡಿದ ನೋಡಲ್ ಅಧಿಕಾರಿ ಕವಿತಾ, ಗ್ರಾಮಸ್ಥರಿಂದ ಮಾಹಿತಿ ಪಡೆದು ಹಲವು ಸಲಹೆಗಳನ್ನು ನೀಡಿದರು. ಚಂದ್ರಗಿರಿ, ಅಂತೋಣಿ ಎಸ್ಟೇಟ್, ನವಗ್ರಾಮ, ಕೋಟೆಕಾಡು ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿದ ಅಧಿಕಾರಿ, ಧಾರಾಕಾರ ಮಳೆ ಸುರಿದು ಅಪಾಯದ ಮುನ್ಸೂಚನೆ ಎದುರಾದರೆ ತಕ್ಷಣ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಿದರು.

ಗ್ರಾಮಸ್ಥರು ತಮ್ಮ ವಾಸದ ಮನೆಯ ಸುತ್ತಮುತ್ತಲ ಪರಿಸ್ಥಿತಿಯನ್ನು ಅಧಿಕಾರಿಗೆ ವಿವರಿಸಿದರು. ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ ಮತ್ತಿತರರು ಈ ಸಂದರ್ಭ ಹಾಜರಿದ್ದರು.