ಸಿದ್ದಾಪುರ, ಜೂ. 21: ಮಾಲ್ದಾರೆ ಅರಣ್ಯ ಹಕ್ಕು ಸಮಿತಿಯ ಗ್ರಾಮ ಸಭೆಯು ಮಾಲ್ದಾರೆ ಗ್ರಾ.ಪಂ. ಆವರಣದಲ್ಲಿ ಸಮಿತಿಯ ಅಧ್ಯಕ್ಷ ರಾಜು ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಾಲ್ದಾರೆ ನಿವಾಸಿ ಕುಂಞಣ್ಣ ಮಾತನಾಡಿ, ಅರಣ್ಯ ಪ್ರದೇಶದೊಳಗೆ ವಾಸ ಮಾಡುವ ಇತರ ಪಾರಂಪರಿಕ ನಿವಾಸಿಗಳು ಅಧಿಕಾರಿಗಳಿಗೆ ಸಲ್ಲಿಸಿರುವ ಕ್ಲೈಂ ಫಾರಂ ತಿರಸ್ಕಾರಗೊಂಡಿದ್ದು, ಈ ಬಗ್ಗೆ ಮರು ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿಕೊಂಡರು.

ಪರಿಶಿಷ್ಟ ವರ್ಗಗಳ ಕುಟುಂಬಗಳಿಗೆ ಹಕ್ಕು ಸಿಕ್ಕಿರುವ ಜಾಗವನ್ನು ಪುನರ್ ಸರ್ವೆ ಮಾಡಬೇಕೆಂದು ಹಾಡಿಯ ನಿವಾಸಿಗಳು ಒತ್ತಾಯಿಸಿದರು. ಅಲ್ಲದೇ ಸಮುದಾಯ ಹಕ್ಕು ಕ್ಲೈಂ ಅರ್ಜಿಗಳಿಗೆ ಜಿ.ಪಿ.ಎಸ್. ಸರ್ವೆಯ ನಕ್ಷೆಯನ್ನು ಲಗತ್ತಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ರಾಣಿ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಗೂಳಿ, ಐ.ಟಿ.ಡಿ.ಪಿ. ಅಧಿಕಾರಿ ನವೀನ್, ಪಿ.ಡಿ.ಓ. ರಾಜೇಶ್ ಸಮಿತಿಯ ಪದಾಧಿಕಾರಿ ಚಂದ್ರ, ಪುಟ್ಟ, ಚಂಗಪ್ಪ ಇನ್ನಿತರರು ಇದ್ದರು.