ಕುಶಾಲನಗರ, ಜೂ. 21: ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಿನ್ನೆಲೆಯಲ್ಲಿ, ರೂ. 20 ಲಕ್ಷ ವೆಚ್ಚದ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ ಎಂದು ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್ ಮಾಹಿತಿ ನೀಡಿದ್ದಾರೆ.
ಸ್ವಚ್ಛ ಭಾರತ್ ಯೋಜನೆಯಡಿ ಈ ಅನುದಾನ ಕಲ್ಪಿಸಲಾಗಿದ್ದು, ಗುಮ್ಮನಕೊಲ್ಲಿ ವ್ಯಾಪ್ತಿಯಲ್ಲಿ 1 ಏಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣವಾಗಲಿದ್ದು ಸದÀ್ಯದಲ್ಲಿಯೇ ಕಾಮಗಾರಿಯ ಟೆಂಡರ್ ಕೈಗೆತ್ತಿಕೊಳ್ಳಲಾಗುವದು. ರೂ. 10 ಲಕ್ಷ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಸೇರಿದಂತೆ ಕಸ ಸಂಗ್ರಹಿಸಲು ಟ್ರ್ಯಾಕ್ಟರ್ ಖರೀದಿ ಮತ್ತು ಯಂತ್ರೋಪಕರಣಗಳ ಖರೀದಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಮಾರ್ಗಸೂಚಿಗಳ ಬಗ್ಗೆ ನಾಗರಿಕರಿಗೆ ಕರಪತ್ರ ಮೂಲಕ ಮಾಹಿತಿ ಒದಗಿಸಲಾಗುತ್ತಿದೆ. ಈ ಸಂಬಂಧ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಪ್ರತಿ ಮನೆಮನೆಗೆ ತೆರಳಿ ಅರಿವು ಮಾರ್ಗದರ್ಶನ ನೀಡಲು ಕಾರ್ಯಸೂಚಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಳ್ಳುಸೋಗೆ ಮುಖ್ಯರಸ್ತೆಯ ಒತ್ತಿನಲ್ಲಿ ಕಾವೇರಿ ನದಿಗೆ ತೆರಳುವ ರಸ್ತೆಯಲ್ಲಿ ಕಸದ ರಾಶಿ ಕಂಡುಬರುತ್ತಿದ್ದು ಅದನ್ನು ಸಾರ್ವಜನಿಕರ ದೂರಿನ ಮೇರೆಗೆ ತಕ್ಷಣ ತೆರವುಗೊಳಿಸಲಾಗಿದೆ. ಅಲ್ಲದೆ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವ ಬಗ್ಗೆ ಪಂಚಾಯಿತಿ ಮೂಲಕ ನಿಗಾವಹಿಸುತ್ತಿದ್ದು, ಅಂಗಡಿ ಮಾಲೀಕರಿಗೆ ಈ ನಿಟ್ಟಿನಲ್ಲಿ ನೋಟಿಸ್ ನೀಡಲಾಗುವದು. ಕಸ ವಿಲೇವಾರಿಗೆ ಸಹಕರಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ. - ಚಂದ್ರಮೋಹನ್