ಕೂಡಿಗೆ, ಜೂ. 21: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2017-18ನೇ ಸಾಲಿನ ಗಾಂಧಿ ಪುರಸ್ಕಾರದಲ್ಲಿ ದೊರೆತ ರೂ. 5 ಲಕ್ಷ ಹಣದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸ ಲಾಯಿತು. ಕಳೆದ ಗ್ರಾಮ ಸಭೆಯಲ್ಲಿ ನಿವೇಶನ ರಹಿತ ಅರ್ಜಿಗಳನ್ನು ಪುರಸ್ಕರಿಸಿ ಅರ್ಹ ಫಲಾನುಭವಿಯನ್ನು ಈ ಸಂದರ್ಭ ಆಯ್ಕೆ ಮಾಡಲಾಯಿತು.
ಸದಸ್ಯರಾದ ದಿನೇಶ್ ಮತ್ತು ಮಧುಸೂದನ್ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಕಸ ವಿಲೇವಾರಿಯ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಟ್ಟು ಅವುಗಳ ಸಂರಕ್ಷಿಸುವ ಜವಬ್ದಾರಿಯನ್ನು ಗ್ರಾ.ಪಂ. ಮೂಲಕ ನಡೆಸಬೇಕು ಎಂದು ತೀರ್ಮಾನ ಕೈಗೊಳ್ಳ ಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಲತಾ ಮಾತನಾಡಿ, ಸದಸ್ಯರ ಅಭಿಪ್ರಾಯಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಗ್ರಾಮ ಪಂಚಾಯಿತಿಯ ಅನುದಾನದ ಆಧಾರದ ಮೇಲೆ ಎಲ್ಲಾ ವಾರ್ಡಿನ ಮೂಲಭೂತ ಸೌಕರ್ಯವನ್ನು ಒದಗಿಸಲು ಹೆಚ್ಚಿನ ಆಧ್ಯತೆ ನೀಡಲಾಗುವದು. ಈಗಾಗಲೇ ಸುಚಿತ್ವಕ್ಕಾಗಿ ಹೆಚ್ಚು ಹಣವನ್ನು ಕಾದಿರಿಸಿ ಶುಚಿತ್ವದ ಕಡೆಗೆ ಗಮನಹರಿಸಿ ಕಸ ವಿಲೇವಾರಿ ಮಾಡುವದರಲ್ಲಿ ತುರ್ತು ಕ್ರಮಕೈಗೊಳ್ಳಲಾಗಿದೆ. ಚರಂಡಿಗಳ ನೀರು ಸರಾಗವಾಗಿ ಹರಿಯುವಂತೆ ಗ್ರಾ.ಪಂ. ಅನುದಾನದಲ್ಲಿ ಚರಂಡಿ ವ್ಯವಸ್ಥೆಯನ್ನು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಕೇಶ್ ಮಾತನಾಡಿ, ಗ್ರಾಮ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಶಾಲೆಗಳ ತಡೆಗೋಡೆ ಮತ್ತು ಮಾಸಿಕ ಸಭೆಯಲ್ಲಿ ತಯಾರಿಸಿರುವ ಕ್ರಿಯಾಯೋಜನೆಯ ಕಾಮಗಾರಿಗಳನ್ನು ಅತೀ ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವದು. ಗ್ರಾಮಸ್ಥರು ಉದ್ಯೋಗ ಖಾತರಿಯ ನೇಮಕಾತಿ ಯಲ್ಲಿ ತಮ್ಮ ಹೆಸರನ್ನು ನೋಂದಾ ಯಿಸಿಕೊಂಡು ತಮ್ಮ ಗ್ರಾಮದ ಕಾಮಗಾರಿಯ ಕೆಲಸವನ್ನು ನಿರ್ವಹಿಸಲು ಸಹಕಾರಿಗಳಾಗಬೇಕು ಎಂದರು. ಸದಸ್ಯರು ತಮ್ಮ ತಮ್ಮ ವಾರ್ಡಿನ ಜೊತೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವ ಯೋಜನೆಯಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅತಿಮುಖ್ಯವಾಗಿರುತ್ತದೆ. ಪರಿಸರಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಎಲ್ಲರೂ ಈ ಮಹತ್ವದ ಕಾರ್ಯಕ್ಕೆ ಭಾಗಿಯಾಗಬೇಕೆಂದು ಸಭೆಗೆ ಮನವಿ ಮಾಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ, ಸದಸ್ಯರಾದ ಸರೋಜಮ್ಮ, ಹೆಚ್.ಟಿ. ದಿನೇಶ್, ಮಧುಸೂದನ್, ಶಿವನಂಜಪ್ಪ, ವೆಂಕಟೇಶ್, ದೇವಮ್ಮ, ಚೇತನ್, ಅಶೋಕ್ ಹೆಚ್.ಕೆ., ವಿಜಯ ಹೆಚ್.ಆರ್, ಪ್ರಮೀಳಾ, ಪ್ರೇಮ, ಮಂಜುಳಾ ಹಾಗೂ ಪಂಚಾಯಿತಿಯ ಸಿಬ್ಬಂದಿಗಳು ಇದ್ದರು.