ಪ್ರಸ್ತುತದ ವರ್ಷಗಳಲ್ಲಿ ಏಲಕ್ಕಿ ಬೆಳೆಗೆ ಸಂಬಂಧಿಸಿದಂತೆ ಕಂಡುಬರುತ್ತಿರುವ ಮಳೆಯ ಏರು-ಪೇರು ಕೂಡ ಈ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬೇಸಿಗೆ ಅವಧಿಯಲ್ಲಿ ಅಗತ್ಯ ಮಳೆ ಸಿಗದಿದ್ದರೂ ಕಷ್ಟ, ಮಳೆಗಾಲದಲ್ಲಿ ಅತ್ಯಧಿಕ ಮಳೆಯಾದರೂ ಕಷ್ಟ. ಇದರೊಂದಿಗೆ ವಿವಿಧ ರೋಗಬಾಧೆ, ಕಾರ್ಮಿಕರ ಸಮಸ್ಯೆ, ವನ್ಯಪ್ರಾಣಿಗಳ ಕಾಟದಂತಹ ಕಾರಣದಿಂದಾಗಿ ಏಲಕ್ಕಿಯತ್ತ ಬೆಳೆಗಾರರು ನಿರಾಸಕ್ತಿ ತೋರುವಂತಾಗಿದೆ ಎಂದು ಈ ಹಿಂದೆ ಏಲಕ್ಕಿ ಕೃಷಿಯಲ್ಲಿ ಉತ್ತಮ ಸಾಧನೆ ತೋರಿದ ಬೆಳೆಗಾರ ತೆರಾಲುವಿನ ಕೀಕೀರ ನಂದಾ ಸುಬ್ಬಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂತಹ ಬದಲಾವಣೆ ಸಮಸ್ಯೆಗಳಿಂದಾಗಿ ಎಲ್ಲೆಡೆ ಫಸಲು ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಧಾರಣೆ ಅಧಿಕವಾಗುತ್ತಿದೆ. ಭವಿಷ್ಯದಲ್ಲಿ ಇನ್ನೂ ಅಧಿಕ ಬೇಡಿಕೆ ಬೆಲೆ ಬಂದರೂ ಅಚ್ಚರಿಯಿಲ್ಲವೆಂದು ಅವರು ಹೇಳಿದರು. ಉತ್ತಮ ನಿರ್ವಹಣೆ ಮಾಡಿದಲ್ಲಿ ಈ ಹಿಂದೆ ಜೂನ್‍ನಿಂದ ಜನವರಿ ತನಕವೂ ಫಸಲು ಸಿಗುತ್ತಿತ್ತು ಎಂದು ಸ್ಮರಿಸಿದ ಅವರು, ಏಲಕ್ಕಿ ನಾಟಿ ಮಾಡಿದರೆ ಮೂರು ವರ್ಷದಿಂದಲೇ ಫಸಲು ಬರುತ್ತದೆ. ಆದರೆ ಈಗಿನ ಸನ್ನಿವೇಶದಲ್ಲಿ ಕಾಫಿಗೆ ಹೋಲಿಸಿದಲ್ಲಿ ಬೆಲೆ ಅಧಿಕ ಬಂದರೂ ನಿರ್ವಹಣೆ ವೆಚ್ಚವೂ ಅಧಿಕವಾಗುತ್ತದೆ ಎಂದರು.