ಶನಿವಾರಸಂತೆ, ಜೂ. 20: ಕೂಲಿ ಕಾರ್ಮಿಕರ ಮಕ್ಕಳು ಕೂಲಿ ಕಾರ್ಮಿಕರೇ ಆಗದೆ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗ ಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್. ದಿಂಡಲಕೊಪ್ಪ ಶಿವಪುತ್ರ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ ವತಿಯಿಂದ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಸಹಭಾಗಿತ್ವದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದ ಪಿಂಚಣಿ ಯೋಜನೆ ಯನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಕಾನೂನು ಮಾಹಿತಿಯ ಅರಿವು ಮೂಡಿಸಿ ಕೊಂಡು ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಬದುಕನ್ನು ಸಹ್ಯವಾಗಿಸಿಕೊಳ್ಳಬೇಕು ಎಂದು ನ್ಯಾಯಾಧೀಶ ಶಿವಪುತ್ರ ಸಲಹೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಪ್ರತಿಭಾ ಮಾತನಾಡಿ, ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
ಬಾಲ ಕಾರ್ಮಿಕ ಪದ್ಧತಿಗೆ ಮುಕ್ತಾಯ ಹಾಡಿ, ಶಿಕ್ಷಣದ ಮೂಲಕ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಬೇಕು. ವಿದ್ಯೆ ಯಿಂದಲೇ ಪ್ರತಿ ಮಗುವಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಎಂ. ಮಹದೇವಸ್ವಾಮಿ ಮಾತನಾಡಿ, ಯಾವದೇ ಉದ್ಯಮದಲ್ಲಿ ದುಡಿಯುವ 14 ವಯಸ್ಸಿನೊಳಗಿನ ಮಕ್ಕಳು ಬಾಲ ಕಾರ್ಮಿಕರೆನಿಸುತ್ತಾರೆ. ವಿವಿಧ ಇಲಾಖೆಗಳ ಮೂಲಕ ಬಾಲ ಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ರಕ್ಷಿಸುವ ಹಾಗೂ ಶಿಕ್ಷಣ ಕೊಡಿಸುವ ಸರಕಾರದ ಯೋಜನೆ ಕಾರ್ಯಗತÀವಾಗುತ್ತಿದೆ ಎಂದರು.
ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ ಮಾತನಾಡಿ ದರು. ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ಮಾತನಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ನಾರಾಯಣ್, ಮಹೇಶ್, ಶೇಖರ್, ದುಂಡಳ್ಳಿ ಗ್ರಾ.ಪಂ. ಸದಸ್ಯರಾದ ಎನ್.ಕೆ. ಸುಮತಿ, ಎಸ್.ವಿ. ಸಂತೋಷ್, ಶನಿವಾರಸಂತೆ ಗ್ರಾ.ಪಂ. ಸದಸ್ಯ ಹರೀಶ್ ಕುಮಾರ್, ವಿಘ್ನೇಶ್ವರ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್, ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳು, ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಹಾಗೂ ಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.