ಕುಶಾಲನಗರ, ಜೂ. 20: ಪ್ರತಿಯೊಬ್ಬರೂ ಸತ್ಯ ಮತ್ತು ಶಾಂತಿ ಸಂದೇಶವನ್ನು ಹರಡುವ ಮೂಲಕ ಪರಸ್ಪರ ಪ್ರೇಮ ತುಂಬಿದ ಸಮಾಜವನ್ನು ಕಟ್ಟುವಂತಾಗಬೇಕು ಎಂದು ರಾಜಸ್ಥಾನದ ಜೈನ ಗುರು ಮಾತೆ ವಿಜಯಲತಾ ಕರೆ ನೀಡಿದ್ದಾರೆ.

ದೇಶಾದ್ಯಂತ ಕೈಗೊಂಡಿರುವ ಶಾಂತಿಗಾಗಿ ಪಾದಯಾತ್ರೆ ಕುಶಾಲನಗರಕ್ಕೆ ಆಗಮಿಸಿದಾಗ ಕುಶಾಲನಗರದ ಜೈನ ಸಮಾಜದಿಂದ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಜನತೆ ಇಂದು ಶಾಂತಿಯ ಹುಡುಕಾಟದಲ್ಲಿದ್ದಾರೆ.

ಹೆಚ್ಚಿನ ಜನ ನೆಮ್ಮದಿಯಿಂದ ಬದುಕು ಕಾಣುತ್ತಿಲ್ಲ. ದೇವರು ಪ್ರತಿಯೊಬ್ಬರಿಗೂ ಸರ್ವವನ್ನು ಕರುಣಿಸಿದ್ದಾನೆ. ಜನರು ಸ್ವಾರ್ಥಿಗಳಾಗುತ್ತಿದ್ದು ಸ್ವಾರ್ಥದ ಬದುಕು ನಡೆಸುತ್ತಿರುವದರಿಂದ ಮನುಷ್ಯ ಮನುಷ್ಯರಲ್ಲಿ ಕಂದಕ ಏರ್ಪಡುತ್ತಿದೆ ಎಂದರು.

ಸಾಮರಸ್ಯ ಕಾಣದಾಗಿದೆ. ಪ್ರತಿಯೊಬ್ಬರು ಪರಸ್ಪರ ಪ್ರೇಮದಿಂದ ಬದುಕಬೇಕು. ಭೂಮಿಯ ಮೇಲಿನ ಹುಟ್ಟು, ಬದುಕು, ಸಾವು ಎಂಬ ಮೂರು ದಿನದ ಜೀವನದ ಆಟದಲ್ಲಿ ಪರಸ್ಪರ ಸೋದರರಾಗಿ ಬದುಕಬೇಕು ಎಂದು ಮಾತೆ ವಿಜಯಲತಾ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಣಿ ಹಿಂಸೆಯನ್ನು ಯಾರು ಕೂಡ ಮಾಡಬಾರದು. ತಾವುಗಳೂ ಬದುಕಿ, ಇತರರನ್ನು ಬದುಕಲು ಬಿಡಿ ಎಂದರು.

ಈ ಸಂದರ್ಭದಲ್ಲಿ ಪುಣ್ಯ ಶ್ರೀಜಿ ಅಮ್ಮ, ಪ್ರಗ್ಯಾಶ್ರೀ ಅಮ್ಮ, ಕುಶಾಲನಗರದ ಜೈನ್ ಸಮಾಜದ ಅಧ್ಯಕ್ಷ ಶಾಂತಿಲಾಲ್ ಜೈನ್, ಪ್ರಮುಖರಾದ ಕೈಲಾಸ್ ಚಂದ್ ಜೈನ್, ರಾಜೇಶ್ ಜೈನ್, ವಿಮಲ್ ಜೈನ್, ಲಕ್ಷ್ಮಿಲಾಲ್ ಜೈನ್ ಮತ್ತಿತರರು ಇದ್ದರು.