ಶನಿವಾರಸಂತೆ, ಜೂ. 20: ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿಯಲ್ಲಿ ಬಾಕಿ ಇರುವ ಎರಡು ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡಲು ಮನವೊಲಿಸುವ ಬಗ್ಗೆ ತೀರ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಭವನ ನಿರ್ಮಾಣ ಹಾಗೀ ರೈತರ ಕೃಷಿ ಉತ್ಪನ್ನಗಳನ್ನು ಶೇಖರಿಸಿಡಲು ಗೋದಾಮು ನಿರ್ಮಾಣ ಮಾಡುವಂತೆ ಸ್ಥಳ ಗುರುತಿಸಲಾಯಿತು. ಸ್ವಚ್ಛಮೇವ ಜಯತೆ ಕಾರ್ಯಕ್ರಮದ ಅಂಗವಾಗಿ ಮೂರು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಪ್ರಗತಿಯಲ್ಲಿದ್ದು, ಕೂಡಲೇ ಪೂರ್ಣಗೊಳಿಸುವಂತೆ ಚರ್ಚಿಸಲಾಯಿತು. ಕಾಜೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈಗಾಗಲೇ ಹೊಸ ಕೊಳವೆ ಬಾವಿ ಕೊರೆಯಲಾಗಿದ್ದು, ಶೀಘ್ರವಾಗಿ ಪೈಪ್‍ಲೈನ್ ಸಂಪರ್ಕ ನೀಡಲು ತೀರ್ಮಾನಿಸಲಾಯಿತು.

ಹೊಸದಾಗಿ ಕೋಳಿ ಅಂಗಡಿಯನ್ನು ಪಂಚಾಯಿತಿ ಕಚೇರಿ ಸಮೀಪ ತೆರೆದಿರುವ ಬಗ್ಗೆ ಅಧ್ಯಕ್ಷ ಸಿ.ಜೆ. ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಎನ್.ಕೆ. ಸುಮತಿ, ನೇತ್ರಾವತಿ, ಕಮಲಮ್ಮ, ಮನು ಹರೀಶ್, ಬಿಂದಮ್ಮ, ಯೋಗೇಂದ್ರ, ಸಂತೋಷ್, ಹೂವಣ್ಣ, ಎಂ.ಟಿ. ರಂಗಚಾರ್, ರಕ್ಷಿತ್, ಕಾರ್ಯದರ್ಶಿ ವೇಣುಗೋಪಾಲ್, ಲೆಕ್ಕ ಸಹಾಯಕ ದೇವರಾಜ್ ಉಪಸ್ಥಿತರಿದ್ದರು.