*ಸಿದ್ದಾಪುರ, ಜೂ. 20: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗಿರಿಜನ ಆಶ್ರಮ ಶಾಲೆ ಸುಸಜ್ಜಿತ ವ್ಯವಸ್ಥೆಗಳಿದ್ದರೂ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿಗೆ ತಲಪಿದೆ ಎಂಬ ಬೇಸರ ಗಿರಿಜನ ಮುಖಂಡರಿಂದ ಮತ್ತು ಹಾಡಿಗಳ ನಿವಾಸಿಗಳಿಂದ ವ್ಯಕ್ತಗೊಂಡಿದೆ.

ಕೆಲ ವರ್ಷಗಳ ಹಿಂದೆ ಸಮರ್ಪಕ ಮೂಲಭೂತ ವ್ಯವಸ್ಥೆಗಳಿಂದ ಆಶ್ರಮ ಶಾಲೆ ವಂಚಿತವಾದಾಗ ಇಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದೀಗ ಸರ್ಕಾರ ಪ್ರತಿ ಮೂಲಭೂತ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಿಕೊಟ್ಟರೂ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಮುಂದಿನ ಕೆಲವೇ ವರ್ಷಗಳಲ್ಲಿ ಆಶ್ರಮ ಶಾಲೆ ಮುಚ್ಚಿ ಹೊಗಬಹುದು ಎಂದು ಗಿರಿಜನ ಮುಖಂಡ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಅಪ್ಪಾಜಿ ತಿಳಿಸಿದ್ದಾರೆ.

ಆಶ್ರಮ ಶಾಲೆಯ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳು ತಂಗುತ್ತಿದ್ದು ಇಲ್ಲಿ ಶಿಕ್ಷಕರು ಮತ್ತು ವಾರ್ಡನ್‍ಗಳು ವಿದ್ಯಾರ್ಥಿಗಳೊಂದಿಗೆ ತಂಗಬೇಕಿರುವದು ನಿಯಮ. ಆದರೆ ಆಶ್ರಮ ಶಾಲೆಯಲ್ಲಿ ಶಿಕ್ಷಕರು ತಂಗುತ್ತಿಲ್ಲ ಮತ್ತು ವಾರ್ಡ್‍ನ್‍ಗಳ ನೇಮಕಾತಿ ಇದುವರೆಗೂ ಆಗಿಲ್ಲ ಎಂದು ಗ್ರಾಮಸ್ಥರು ಮತ್ತು ಗಿರಿಜನ ಮುಖಂಡರು ದೂರುತ್ತಿದ್ದಾರೆ.

ಸರ್ಕಾರ ಇಲ್ಲಿ ಸುಸಜ್ಜಿತ ಡೈನಿಂಗ್ ಹಾಲ್, ಶುದ್ಧ ನೀರಿನ ಘಟಕ, ವಿದ್ಯುತ್ ವ್ಯವಸ್ಥೆಗಳಿದ್ದರೂ ರಾತ್ರಿ ವೇಳೆ ವಾರ್ಡ್‍ನ್‍ಗಳು ಇಲ್ಲದಿರುವದರಿಂದ ಪೋಷಕರು ಆಶ್ರಮ ಶಾಲೆಯಲ್ಲಿ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ದೂರುಗಳು ಪೋಷಕರ ವಲಯದಿಂದ ಕೇಳಿ ಬರುತ್ತಿದೆ.

ಅಡುಗೆ ಕೆಲಸ ನಿರ್ವಹಿಸುವವರು ಇಲ್ಲಿ ವಿದ್ಯಾರ್ಥಿಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದು ಕೂಡಲೇ ವಾರ್ಡ್‍ನ್‍ಗಳ ನೇಮಕಾತಿ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಸವನಹಳ್ಳಿ ಗಿರಿಜನ ಅಭಿವೃದ್ಧಿ ಶಾಲೆಗೆ ಕೂಡಲೇ ವಾರ್ಡ್‍ನ್‍ಗಳನ್ನು ನೇಮಕ ಮಾಡಬೇಕು ಎಂಬ ಒತ್ತಾಯ ಗಿರಿಜನ ಮುಖಂಡರಿಂದ, ಪೋಷಕರಿಂದ ಕೇಳಿ ಬಂದಿದೆ.