ಕುಶಾಲನಗರ, ಜೂ. 20: ಕಾವೇರಿ ನದಿ ಸಂರಕ್ಷಣೆ ಕಾವೇರಿ ನಾಡಿನ ಜನತೆಯ ಪ್ರಥಮ ಆದ್ಯ ಕರ್ತವ್ಯವಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಎಂ.ಕೆ. ಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅವರು ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಜೀವನದಿಗೆ ನಡೆದ 95ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನಡೆದ ಆರತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ, ಅಷ್ಟೋತ್ತರ ನಂತರ ನದಿಗೆ ಆರತಿ ಬೆಳಗಿದರು.

ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಮುಂದಿನ ಅಕ್ಟೋಬರ್ ತಿಂಗಳಲ್ಲಿ 100ನೇ ಮಹಾ ಆರತಿ ಕಾರ್ಯಕ್ರಮ ಜರುಗಲಿದ್ದು ಈ ಸಂದರ್ಭ 3 ದಿನಗಳ ಕಾಲ ಕಾವೇರಿ ನದಿ ಹಬ್ಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದರು.

ಮಹಾ ಆರತಿ ಬಳಗದ ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಮಂಡೇಪಂಡ ಬೋಸ್ ಮೊಣ್ಣಪ್ಪ, ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು. ಹುಣ್ಣಿಮೆ ಅಂಗವಾಗಿ ಕುಶಾಲನಗರ ಸಾಯಿ ಮಂದಿರದಲ್ಲಿ ಬೆಳಗ್ಗಿನಿಂದಲೇ ಪೂಜಾ ವಿಧಿವಿಧಾನಗಳು ಜರುಗಿದವು. ದೇವರಿಗೆ ಆರತಿ ಕಾರ್ಯಕ್ರಮ ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಂಜೆ ಆರತಿ ಕಾರ್ಯಕ್ರಮಗಳೊಂದಿಗೆ ಭಕ್ತಾದಿಗಳಿಗೆ ಅನ್ನದಾನ ನಡೆಯಿತು.

ದೇವಾಲಯದ ಸಮಿತಿ ಅಧ್ಯಕ್ಷ ಧರೇಶ್ ಬಾಬು, ಎಸ್.ಎಲ್. ಶ್ರೀಪತಿ, ಓಬುಳರೆಡ್ಡಿ ಮತ್ತಿತರರು ಇದ್ದರು. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಕುಶಾಲನಗರದ ಕೊಪ್ಪ ಕಾವೇರಿ ಸೇತುವೆ ಬಳಿ ಕಾವೇರಿ ಪ್ರತಿಮೆಗೆ ಅಭಿಷೇಕ, ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.