ಶನಿವಾರಸಂತೆ, ಜೂ. 19: ಸಮೀಪದ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯ ಹಿಂಭಾಗ 2 ಸೆಂಟ್ ಜಾಗದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಇದ್ದು, ಸುತ್ತಲೂ ತ್ಯಾಜ್ಯದ ರಾಶಿ ತುಂಬಿ ಚೆಲ್ಲಾಡುತ್ತಿದೆ. ದಾರಿಯೇ ಮುಚ್ಚಿ ಹೋಗಿದ್ದು, ಇದರಿಂದ ಶವ ಸಂಸ್ಕಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ವಿವೇಕಾನಂದ್, ಸದಸ್ಯರಾದ ಮೋಹನ್ ಕುಮಾರ್, ರಾಜು, ಸಂಜಯ್, ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರುದ್ರಭೂಮಿಯ ಪಕ್ಕದಲ್ಲೇ 60 ಸೆಂಟ್ ಜಾಗದಲ್ಲಿ ಗ್ರಾಮ ಪಂಚಾಯಿತಿಯವರು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಮದ್ಯದಂಗಡಿಯವರೂ ಗ್ಲಾಸು, ಬಾಟಲುಗಳನ್ನು ಎಸೆಯುತ್ತಿದ್ದಾರೆ. ಸುತ್ತಲೂ ತ್ಯಾಜ್ಯವೇ ಹರಡಿದ್ದು, ರುದ್ರಭೂಮಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ. ಕೊಳೆತ ತ್ಯಾಜ್ಯದಿಂದ ದುರ್ನಾತ ಹರಡಿದ್ದು, ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಇತ್ತೀಚೆಗೆ ಧನು ಎಂಬ ಯುವತಿ ಸಾವನ್ನಪ್ಪಿದ್ದು, ಶವಸಂಸ್ಕಾರಕ್ಕೆ ರುದ್ರಭೂಮಿಯೊಳಗೆ ಸಾಗಲು ದಾರಿಯೇ ಇಲ್ಲವಾಗಿ ಜೆಸಿಬಿ ಮೂಲಕ ದಾರಿ ಮಾಡಿಕೊಂಡು ಹೋಗಬೇಕಾಯಿತು. ಚಿತೆಗೆ ಸೌದೆ ಸಾಗಿಸಲು ಸಾಧ್ಯವಾಗದೇ ಮರದ ತುಂಡುಗಳನ್ನು ಹೊತ್ತು ಸ್ಥಳಕ್ಕೆ ಸಾಗಿಸಲಾಯಿತು. ಶವಸಂಸ್ಕಾರಕ್ಕೆ ತುಂಬ ತೊಂದರೆಯಾಯಿತು ಎಂದು ದೂರಿದ್ದಾರೆ. ಈ ಹಿಂದೆ ಶಾಸಕರು, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಸ್ಮಶಾನ ಅಭಿವೃದ್ಧಿ ಬಗ್ಗೆ ಭರವಸೆ ನೀಡಿದ್ದರು. ಶಾಸಕರ ಅನುದಾನದಿಂದ ಶವಾಗಾರದ ಶೆಡ್ ನಿರ್ಮಾಣವಾಗಿದೆ. ಪರ್ನೆಸ್ ಅಳವಡಿಕೆಯಾಗಿರುವದಿಲ್ಲ.

ಕೊಡ್ಲಿಪೇಟೆ ಪಟ್ಟಣದ ಸಾರ್ವಜನಿಕರಿಗಾಗಿ ಇರುವ ಹಿಂದೂ ರುದ್ರಭೂಮಿಯ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಕ್ರಮಕೈಗೊಂಡು ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು. ತ್ಯಾಜ್ಯ ವಿಲೇವಾರಿ ಮಾಡದಂತೆ ಸುತ್ತಲು ಜಾಗವನ್ನು ಸ್ವಚ್ಛಗೊಳಿಸಬೇಕು. ನೀರಿಗಾಗಿ ಕೊಳವೆ ಬಾವಿ ಹಾಗೂ ತಡೆಗೋಡೆಯನ್ನು ನಿರ್ಮಿಸಿಕೊಡಬೇಕು. ದಾರಿಯನ್ನು ಸುಗಮಗೊಳಿಸಬೇಕು ಎಂದು ರುದ್ರಭೂಮಿ ಸಮಿತಿಯವರು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.