ಸಿದ್ದಾಪುರ, ಜೂ. 19: ಮಾಲ್ದಾರೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ, ಬಾಡಗ ವ್ಯಾಪ್ತಿಯಲ್ಲಿ ಸಾರ್ವಜನಿಕ ಕೆರೆಯ ಒತ್ತುವರಿ ತೆರವು, ಸಾರ್ವಜನಿಕ ಮೈದಾನ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಒತ್ತಾಯಿಸಿದರು.

ಮಾಲ್ದಾರೆ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ರಾಣಿ ಅಧ್ಯಕ್ಷತೆಯಲ್ಲಿ ನಡೆಯಿತ್ತು. ಗ್ರಾಮಸಭೆಯಲ್ಲಿ ಗ್ರಾ.ಪಂ ಸದಸ್ಯ ಸಜಿ ಥೋಮಸ್ ಮಾತನಾಡಿ, ಮಾಲ್ದಾರೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಗಳು ತೀವ್ರವಾಗಿದ್ದು, ಈ ಬಗ್ಗೆ ಹಲವಾರು ಬಾರಿ ಸಿದ್ದಾಪುರ ಚೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಜೆಗೊಲ್ಲಿ ನಿವಾಸಿ ಅಬೂಬಕ್ಕರ್ ಮಾತನಾಡಿ, ಗ್ರಾಮದ ಸಾಕಷ್ಟು ಮಂದಿ ಬಡವರಿಗೆ ಪಡಿತರ ಚೀಟಿಯ ಸಮಸ್ಯೆಯಾಗಿದ್ದು, ಈ ಬಗ್ಗೆ ಸಭೆಗೆ ಆಹಾರ ಇಲಾಖಾಧಿಕಾರಿ ಯನ್ನು ಕರೆಸುವಂತೆ ಒತ್ತಾಯಿಸಿದರು. ಮಾಲ್ದಾರೆ ನಿವಾಸು ಎಂ.ಎಂ. ಮಿಟ್ಟು ನಂಜಪ್ಪ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯ ಘಟ್ಟದಳ್ಳದ ಒತ್ತುವರಿ ಜಾಗವನ್ನು ಕಂದಾಯ ಇಲಾಖೆ ತೆರವು ಗೊಳಿಸಿದ್ದು, ಈ ಜಾಗವನ್ನು ಗ್ರಾ.ಪಂ ಸ್ವಾದೀನಕ್ಕೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಅಲ್ಲದೇ ಯಾವದೇ ಕಾರಣಕ್ಕೂ ಆ ಜಾಗದಲ್ಲಿ ಸಿದ್ದಾಪುರ ಗ್ರಾ.ಪಂ. ಕಸವಿಲೇವಾರಿ ಮಾಡಲು ಅವಕಾಶ ನೀಡದಂತೆ ಒತ್ತಾಯಿಸಿದರು.

ಆಸ್ತಾನ ಹಾಡಿ ನಿವಾಸಿ ಕುಞಣ್ಣ ಮಾತನಾಡಿ, ದೀನ್ ದಯಾಳ್ ಉಪಾಧ್ಯಾಯ ಯೋಜನೆಯಡಿಯಲ್ಲಿ ಅರಣ್ಯ ಪ್ರದೇಶದೊಳಗೆ ಅಳವಡಿಸಿ ರುವ ವಿದ್ಯುತ್ ಟ್ರಾನ್ಸ್‍ಫಾರಮ್ ಸುತ್ತಲೂ ಬೇಲಿ ಅಳವಡಿಸುವಂತೆ ಒತ್ತಾಯಿಸಿದರು. ಅಲ್ಲದೇ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ದುರಸ್ಥಿಪಡಿಸುವಂತೆ ಆಗ್ರಹಿಸಿದರು.

ಗ್ರಾ.ಪಂ. ಸದಸ್ಯ ಸತೀಶ್ ಮಾತನಾಡಿ, ಮಾಲ್ದಾರೆಯ ಕಲ್ಲಳದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದ್ದರೂ ಕೂಡ ವೈದ್ಯರುಗಳಿಲ್ಲದೇ ಈ ಭಾಗದ ನಿವಾಸಿಗಳಿಗೆ ಚಿಕಿತ್ಸೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೇ ಮಾಲ್ದಾರೆಯಲ್ಲಿರುವ ಪಶುವೈದ್ಯ ಆಸ್ಪತ್ರೆಯಲ್ಲಿ ವೈದ್ಯರುಗಳು ಇಲ್ಲದೇ ಸಾಕು ಪ್ರಾಣಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಎಂದರು.

ಗ್ರಾಮಸ್ಥ ರವಿ ಮಾತನಾಡಿ, ಹಾಡಿಗಳಲ್ಲಿ ವಾಸ ಮಾಡುವ ಮಕ್ಕಳು ಶಾಲೆಗಳಿಗೆ ತೆರಳದೆ ಬೀದಿಗಳಲ್ಲಿ ಸುತ್ತಾಡುತ್ತಿದ್ದಾರೆ. ಇಂತಹಾ ಮಕ್ಕಳನ್ನು ಶಿಕ್ಷಕರು ಶಾಲೆಗಳಿಗೆ ಕರೆದುಕೊಂಡು ಹೋಗಿ ಶಿಕ್ಷಣ ನೀಡಬೇಕೆಂದರು.

ಗಿರಿಜನ ಮುಖಂಡೆ ಇಂದಿರ ಮಾತನಾಡಿ, ಆಶ್ರಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಶಾಲೆಯಲ್ಲಿ ಉಳಿಯುವಂತೆ ಹಾಗೂ ಅಲ್ಲಿನ ಮಕ್ಕಳಿಗೆ ಪಾಠ ಪ್ರವಚನ ಮಾಡುವಂತೆ ಐ.ಟಿ.ಡಿ.ಪಿ ಇಲಾಖೆ ಅಧಿಕಾರಿ ಬಳಿ ಮನವಿ ಮಾಡಿದರು. ಮಾಲ್ದಾರೆಯ ಜನಪರ ಯುವಕ ಸಂಘದ ಪಾದಾಧಿಕಾರಿಗಳು ಮಾತನಾಡಿ, ಸಿದ್ದಾಪುರದ ಕೋಳಿ ಮಾಂಸದ ವ್ಯಾಪಾರಿಗಳು ಕೋಳಿ ತ್ಯಾಜ್ಯವನ್ನು ಮಾಲ್ದಾರೆಯ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಈ ಬಗ್ಗೆ ವ್ಯಾಪಾರಿಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲು ಒತ್ತಾಯಿಸಿದರು. ಗ್ರಾಮಸ್ಥ ಚಂಬಂಡ ಬಿಜು ಬಿದ್ದಪ್ಪ ಮಾತನಾಡಿ, ಮಳೆಗಾಲ ಆರಂಭವಾಗಿದ್ದು, ಮನೆಗಳ ಬಳಿ ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

ಪಿ.ಡಿ.ಓ ರಾಜೇಶ್ ಮಾತನಾಡಿ, ಈಗಾಗಲೇ ವಸತಿ ರಹಿತರ 725 ಅರ್ಜಿಗಳು ಗ್ರಾ.ಪಂ.ಗೆ ಸಲ್ಲಿಕೆಯಾಗಿದ್ದು, ವಸತಿ ರಹಿತರು ತಮ್ಮ ಅರ್ಜಿಗಳನ್ನು ಗ್ರಾ.ಪಂ.ಗೆ ನೀಡಬಹುದು ಎಂದರು. ಅನುದಾನದ ಕೊರತೆಯಿಂದ ಸಾಕಷ್ಟು ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುವದು ಎಂದರು.

ತಾ.ಪಂ ಚಿನ್ನಮ್ಮ ಮಾತನಾಡಿ, ನಾಡ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಸರಿಪಡಿಸಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ರಾಜು, ನೋಡಲ್ ಅಧಿಕಾರಿ ಅಂಕಯ್ಯ, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.