ಮಡಿಕೇರಿ, ಜೂ. 19: ಜಿಲ್ಲಾವಾರು ಕೌಶಲ್ಯ ಅಭಿವೃದ್ಧಿ ನಿಗಮವು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರವನ್ನು ತೆರೆದಿದ್ದು, ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ದೊರಕಿಸುವಲ್ಲಿ ತೊಡಗಿಸಿಕೊಂಡಿದೆ. ಕೇಂದ್ರವು ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಹಲವಾರು ಯುವಕ ಹಾಗೂ ಯುವತಿಯರು ತರಬೇತಿಯನ್ನು ಮುಗಿಸಿ ಉದ್ಯೋಗ ಪಡೆದುಕೊಂಡಿದ್ದಾರೆ.

ಇದೀಗ ರೋಜ್ಗಾರ್ ಮೇಳ (ಉದ್ಯೋಗ ಮೇಳ)ವನ್ನು ತಾ. 22 ರಂದು 10.30ಕ್ಕೆ ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಹಾಗೂ ವೀರಾಜಪೇಟೆಯ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಸಹಕಾರಿಯಾಗಲಿದೆ. ಜಿಲ್ಲೆಯ ಎಲ್ಲಾ ಯುವಕ-ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. 10ಕ್ಕೂ ಹೆಚ್ಚು ಉದ್ಯೋಗದಾತ ಸಂಸ್ಥೆಗಳು ಭಾಗವಹಿಸುತ್ತಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.

ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ, ಎಕ್ಸೆಲಸ್ ಲರ್ನಿಂಗ್ ಸಲ್ಯೂಷನ್ಸ್ ಪ್ರೈ. 2ನೇ ಮಹಡಿ, ಶಾನುಭಾಗ್ ಕೇಂದ್ರ, ಎಸ್.ಎಸ್. ರಾಮಮೂರ್ತಿ ರಸ್ತೆ, ವೀರಾಜಪೇಟೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಸದ ಪ್ರತಾಪ್ ಸಿಂಹ ಉದ್ಘಾಟಿಸುವರು. ಶಾಸಕ ಕೆ.ಜಿ. ಬೋಪಯ್ಯ ಭಾಗವಹಿಸುವರು.

ಹೆಚ್ಚಿನ ಮಾಹಿತಿಗಾಗಿ 8892923482, 9686691613, 08274-298831 ಸಂಪರ್ಕಿಸಬಹುದಾಗಿದೆ.