ಮಡಿಕೇರಿ, ಜೂ. 19: ಉತ್ತಮ ಪರಿಸರ ಕಾಪಾಡಲು ಗಿಡ ನೆಡುವದರ ಜೊತೆಗೆ, ಪರಿಸರ ಸಂರಕ್ಷಣೆ ಮಾಡುವದು ಅತೀ ಮುಖ್ಯ. ಆ ನಿಟ್ಟಿನಲ್ಲಿ ಯಾರೂ ಸಹ ಪ್ಲಾಸ್ಟಿಕ್ ಬಳಸಬಾರದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ., ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭವಿಷ್ಯದ ದೃಷ್ಟಿಯಿಂದ ಪ್ಲಾಸ್ಟಿಕ್‍ನ್ನು ಬಳಸಬಾರದು. ತ್ಯಾಜ್ಯವನ್ನು ಆದಷ್ಟು ಕಡಿಮೆ ಮಾಡುವತ್ತ ಗಮನಹರಿಸಬೇಕು. ಪ್ರತಿ ದಿನವು ಪರಿಸರ ಬಗ್ಗೆ ಜಾಗೃತಿ ಇರಬೇಕು. ಜಿಲ್ಲೆಯಲ್ಲಿ ಪರಿಸರ ಮತ್ತು ಅರಣ್ಯದ ಬಗ್ಗೆ ಹೆಚ್ಚಿನ ಕಾಳಜಿಯಿರು ವದು ಶ್ಲಾಘನೀಯ ಎಂದರು.
ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಹೆಚ್ಚಾಗಿ ಕಾಣಬಹುದಾಗಿದೆ. ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿಯೇ 400 ಕ್ಕೂ ಹೆಚ್ಚು ಹುಲಿಗಳು ಹಾಗೂ 6 ಸಾವಿರಕ್ಕೂ ಹೆಚ್ಚು ಆನೆಗಳು ಇವೆ. ಆದರೂ ಕಳೆದ 30-40 ವರ್ಷಗಳಲ್ಲಿ ಕಾಡು ಸಹ ಕಡಿಮೆಯಾಗಿದೆ ಎಂಬದನ್ನು ಮರೆಯುವಂತಿಲ್ಲ. ಆದ್ದರಿಂದ ಮಾನವ ಮತ್ತು ಕಾಡಾನೆ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಕಾಡಿನ ಸಂರಕ್ಷಣೆ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಪರಿಸರ ಪ್ರಜ್ಞೆ ಮತ್ತು ಕಾಳಜಿ ಇರಬೇಕು. ಪರಿಸರ ಸಂರಕ್ಷಣೆ ಕುಟುಂಬದಿಂದಲೇ ಆರಂಭವಾಗಬೇಕು. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಇಂಗುಗುಂಡಿ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.
ಆಕಾಶವಾಣಿ ನಿಲಯದ ಕಾರ್ಯಕ್ರಮ ಅಧಿಕಾರಿ ವಿಜಯ ಅಂಗಡಿ ಮಾತನಾಡಿ ಪ್ರತಿಯೊಬ್ಬರೂ ಬೈಸಿಕಲ್ ಬಳಸುವದರಿಂದ ವಾಯು ಮಾಲಿನ್ಯವನ್ನು ನಿಯಂತ್ರಿಸ ಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೈಸಿಕಲ್ ಬಳಸುವದರಿಂದ ಶಕ್ತಿ ಹೆಚ್ಚುತ್ತದೆ, ಯೋಗ, ವ್ಯಾಯಾಮ ಮಾಡಿದಂತಾಗುತ್ತದೆ. ಆದ್ದರಿಂದ ಉತ್ತಮ ಆರೋಗ್ಯಕ್ಕೆ ಬೈಸಿಕಲ್ ಬಳಕೆ ಅಗತ್ಯ. ಪರಿಸರ ಮಾತ್ರವಲ್ಲ ದೇಹಕ್ಕೂ ಬೈಸಿಕಲ್ ಉಪಯೋಗ ಎಂದರು.
ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮ್ ಕುಮಾರ್ ಪರಿಸರ ಸಂಬಂಧ ಪ್ರತಿಜ್ಞಾ ವಿಧಿ ಬೋಧಿಸಿದರು. ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಘನ ತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿ ರುವ ಬೇಂಗೂರು ಗ್ರಾ.ಪಂ. (ಮಡಿಕೇರಿ ತಾ), ನಂಜರಾಯಪಟ್ಟಣ (ಸೋಮವಾರಪೇಟೆ), ಕುಟ್ಟ (ವೀರಾಜಪೇಟೆ)ಗಳಿಗೆ ಬಹುಮಾನ ನೀಡಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ, ಸಿಂಗ್, ಪೌರಾಯುಕ್ತ ರಮೇಶ್, ಪರಿಸರ ಅಧಿಕಾರಿ ಜಿ.ಆರ್. ಗಣೇಶನ್, ಉಪ ಪರಿಸರ ಅಧಿಕಾರಿಣಿ ಡಾ. ಸುಧಾ ಇತರರು ಇದ್ದರು.
ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು. ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಸ್ವಾಗತಿಸಿದರು. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪರಿಸರ ಜಾಗೃತಿ ಗೀತೆ ಹಾಡಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮೊಹಿದ್ದೀನ್ ವಂದಿಸಿದರು.
ಪರಿಸರ ಜಾಗೃತಿ ಜಾಥಾ: ಮಡಿಕೇರಿ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಪರಿಸರ ಜಾಗೃತಿ ಜಾಥಾ ಗಮನ ಸೆಳೆಯಿತು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಿಂದ ಆರಂಭವಾದ ಪರಿಸರ ಜಾಥಾದಲ್ಲಿ ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ದಾರಿ ಯುದ್ದಕ್ಕೂ ಪರಿಸರ ಘೋಷಣೆಗಳನ್ನು ಮೊಳಗಿಸಿದರು. ಪರಿಸರಕ್ಕೆ ಸಂಬಂಧಿಸಿದ ಘೋಷಣಾ ಫಲಕಗಳನ್ನು ಹಿಡಿದು ಜಾಥಾದಲ್ಲಿ ತೆರಳಿದ ವಿದ್ಯಾರ್ಥಿಗಳು ನಗರದ ಕಾವೇರಿ ಕಲಾಕ್ಷೇತ್ರಕ್ಕೆ ತೆರಳಿದರು.
ಪ್ರಧಾನ ಜಿಲ್ಲಾ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ, ಜಿ.ಪಂ. ಸಿಇಓ ಲಕ್ಷ್ಮೀಪ್ರಿಯ, ಎಸಿಎಫ್‍ಗಳಾದ ನೆಹರು, ದಯಾನಂದ, ಪಿ.ಎ. ಸೀಮಾ, ಬಿಇಒ ಗಾಯತ್ರಿ, ಪರಿಸರ ಅಧಿಕಾರಿ ಜಿ.ಆರ್. ಗಣೇಶನ್, ಉಪ ಪರಿಸರ ಅಧಿಕಾರಿ ಡಾ.ಸುಧಾ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ, ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವಿಜಯ, ಮುಖ್ಯೋಪಾ ಧ್ಯಾಯಿನಿ ದೇವಮ್ಮ, ಅರಣ್ಯ ವಲಯಾಧಿಕಾರಿ ವೈ.ಕೆ. ಜಗದೀಶ್, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.