ಶನಿವಾರಸಂತೆ, ಜೂ. 18: ಗೃಹಿಣಿಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಅತ್ತೆ ಮೇಲೆ ಕೊಲೆ ಪ್ರಕರಣ ದಾಖಲಾಗಿರುವ ಘಟನೆ ಸಮೀಪದ ಗಡಿಭಾಗ ಚಂಗಡಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಚಂಗಡಹಳ್ಳಿಯ ನಿರೂಪ್ ಅವರ ಪತ್ನಿ ಭಾನುಮತಿ (26) ಕೊಲೆಯಾದ ಮಹಿಳೆ. ಇವರು ಆಲೂರು ತಾಲೂಕಿನ ಆನೆಗಳಲೆ ಗ್ರಾಮದ ಚಂದ್ರಯ್ಯ ಅವರ ಪುತ್ರಿಯಾಗಿದ್ದು, ಎರಡು ವರ್ಷಗಳ ಹಿಂದೆ ನಿರೂಪ್ ಅವರೊಂದಿಗೆ ವಿವಾಹವಾಗಿತ್ತು. ಭಾನುಮತಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು ಎಂದು ನಿರೂಪ್ ಹಾಗೂ ಮನೆಯವರು ಸೋಮವಾರ ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವದಾಗಿ ಖಚಿತಪಡಿಸಿದ್ದಾರೆ.

ಮೃತರ ಮರಣೋತ್ತರ ಪರೀಕ್ಷೆ ಮೊದಲು ತಹಶೀಲ್ದಾರ್ ಅವರು ಬರಲೇಬೇಕು ಎಂದು ಚಂಗಡಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ ಮರಣೋತ್ತರ ಪರೀಕ್ಷೆ ವಿಳಂಬವಾಯಿತು. ತಹಶೀಲ್ದಾರ್ ಅವರು ಸಂಜೆಯಾದರೂ ಬಾರದ ಕಾರಣ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ಸೋಮವಾರಪೇಟೆಯ ತಹಶೀಲ್ದಾರ್ ಗೋವಿಂದ್‍ರಾಜ್ ತಡರಾತ್ರಿ ಆಗಮಿಸಿ ಮಹಜರು ನಡೆಸಿದರು.

ಮಂಗಳವಾರ ಬೆಳಿಗ್ಗೆ ಸೋಮವಾರಪೇಟೆ ಸರಕಾರಿ ಆಸ್ಪತ್ರೆಯ ಡಾ. ಇಮಾನಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

ಮೃತ ಭಾನುಮತಿಯ ತಂದೆ ಚಂದ್ರಯ್ಯ ತಮ್ಮ ಮಗಳ ಕೊಲೆಗೆ ಆಕೆಯ ಪತಿ ನಿರೂಪ್, ಅತ್ತೆ ಗೌರಮ್ಮ ಹಾಗೂ ಚಿಕ್ಕಮ್ಮ ಸಾವಿತ್ರಿ ಕಾರಣ ಎಂದು ದೂರು ನೀಡಿದ್ದು, ಯಸಳೂರು ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಎಚ್. ಸುಬ್ಬಯ್ಯ ಅವರು ವರದಕ್ಷಿಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ರಾತ್ರಿ ಶವಾಗಾರದ ಬಳಿ ಜಮಾಯಿಸಿದ್ದ ಚಂಗಡಹಳ್ಳಿ ನೂರಾರು ಮಂದಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದಾಗ ಅಹಿತಕರ ಘಟನೆ ನಡೆಯದಂತೆ ಶನಿವಾರಸಂತೆ ಪೊಲೀಸ್ ಠಾಣೆಯ ಪಿಎಸ್‍ಐ ಎಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿ ಸೂಕ್ತ ಕ್ರಮಕೈಗೊಂಡಿದ್ದರು.