ಮಡಿಕೇರಿ ಜೂ. 17 : ಯುವ ಶಕ್ತಿಗಳ ಕಾರ್ಯ ಚಟುವಟಿಕೆಗಳಿಗಾಗಿ ಮಡಿಕೇರಿ ನಗರದಲ್ಲಿ ನಿರ್ಮಿಸಲಾದ ಯುವಭವನ ಕಟ್ಟಡವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರಿಸದೆ ಇತರ ಸೇವೆಗೆ ಬಳಸುತ್ತಿರುವದು ಯುವ ಸಮೂಹಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಮಾಸಿಕ ಸಭೆ ಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಒಕ್ಕೂಟದ ಜಿಲ್ಲಾಧ್ಯಕ್ಷÀ ಪಿ.ಪಿ. ಸುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯುವ ಒಕ್ಕೂಟದ ಮಾಸಿಕ ಸಭೆಯಲ್ಲಿ ಯುವ ಭವನದ ಕುರಿತು ಚರ್ಚೆ ನಡೆಯಿತು.
ಮಹಿಳಾ ಕಾಲೇಜನ್ನು ಬೇರೆ ಕಡೆಗೆ ವರ್ಗಾಯಿಸಲಿ ಎಂದು ಸದಸ್ಯರು ಒತ್ತಾಯಿಸಿದರು. ತಾತ್ಕಾಲಿಕವಾಗಿ ಕಾಲೇಜನ್ನು ಮುಚ್ಚಿ ಯುವ ಚಟುವಟಿಕೆಗೆ ಯುವ ಭವನವನ್ನು ಬಿಟ್ಟು ಕೊಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಸಲಹೆಗಾರ ಟಾಟು ಮೊಣ್ಣಪ್ಪ, ಮತ್ತೋರ್ವ ಮಾಜಿ ಅಧ್ಯಕ್ಷ ಕಂದಾ ದೇವಯ್ಯ, ಸಲಹೆಗಾರ ಮಾಳಿಗೆಮನೆ ವೆಂಕಟೇಶ್ ಮಾತನಾಡಿದರು.
ತಾಲೂಕು ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ, ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ, ಸೋಮವಾರಪೇಟೆ ತಾಲೂಕು ಸಲಹೆಗಾರ ಕೆ.ಸಿ.ಉದಯಕುಮಾರ್ ಮತ್ತಿತರರು ಯುವ ಭವನದ ಅವಶ್ಯಕತೆಯ ಬಗ್ಗೆ ಮಾತನಾಡಿದರು. ಯುವಭವನಕ್ಕಾಗಿ ಹೋರಾಟ ರೂಪಿಸುವ ಕುರಿತು ಸಭೆ ನಿರ್ಣಯ ಕೈಗೊಂಡಿತು.
ಕಾರ್ಯದರ್ಶಿ ಗಣೇಶ್ ತಾಳತ್ತಮನೆ ಸ್ವಾಗತಿಸಿ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ವಂದಿಸಿದರು. ಮೂರು ತಾಲ್ಲೂಕು ಯುವ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.