ಕೂಡಿಗೆ, ಜೂ. 18: ಮಹಿಳೆಯರು ಸಮಾಜದಲ್ಲಿ ಯಾರನ್ನೂ ಅವಂಭಿಸದೇ ಸ್ವಾವಲಂಬಿಯಾಗಿ ಬದುಕಬೇಕು ಎಂದು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ ಹೇಳಿದರು.
ಕುಶಾಲನಗರದ ಮಾದಾಪಟ್ಟಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಣಾ ಅಭಿಯಾನ, ಶ್ರೀ ಲಕ್ಷ್ಮೀ ಸ್ತ್ರೀ ಶಕ್ತಿ ಸಂಘದ ಉದ್ಘಾಟನಾ ಕಾರ್ಯಕ್ರಮ ಹಾಗೂ ಕಿಶೋರಿಯರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ. ಈ ಹಿನ್ನೆಲೆ ಮಹಿಳೆಯರು ಸ್ವಾವಲಂಬಿಯಾಗಿ ಜೀವಿಸಲು ಮುಂದಾಗಬೇಕು ಎಂದರು.
ಗುಡ್ಡೆಹೊಸೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ಯಾಮ್ ಮಾತನಾಡಿ, ತಮ್ಮ ತಮ್ಮ ಮನೆಯಿಂದಲೇ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಆಗ ಮಾತ್ರ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯ ಎಂದರು.
ಈ ಸಂದರ್ಭ ಶಾಲಾ ಮೈದಾನದಲ್ಲಿ ಗ್ರಾ.ಪಂ. ಅಧಿಕಾರಿ ಶ್ಯಾಮ್, ಗ್ರಾ.ಪಂ. ಅಧ್ಯಕ್ಷೆ ಭಾರತಿ ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸೇರಿ ಗಿಡಗಳನ್ನು ನೆಟ್ಟರು. ಮಕ್ಕಳ ಕ್ರೀಡಾ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ಸಭಾಂಗಣದಲ್ಲಿ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈ ಸಂದರ್ಭ ಗ್ರಾ.ಪಂ. ಸದಸ್ಯೆ ಪುಷ್ಪಾ, ಪ್ರವೀಣ್, ಸ್ತ್ರೀ ಶಕ್ತಿ ಧರ್ಮಸ್ಥಳ ಸಂಘದ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಕುಮಾರಿ ಶೋಭಾ, ಮೇಲ್ವಿಚಾರಕಿ ನಿರ್ಮಲಾ, ಶ್ರೀ ಲಕ್ಷ್ಮಿ ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಹೇಮಾ, ಹಿರಿಯ ಪತ್ರಕರ್ತ ಚಂದ್ರಮೋಹನ್, ಶಾಲಾ ಮುಖ್ಯೋಪಾಧ್ಯಾಯಿನಿ ದೇವಮ್ಮ, ಶಿಕ್ಷಕ ವೃಂದದವರಾದ ಸವಿತಾ, ಜಯಕಲಾ, ಮೀರಾ, ಮಾಳವಿಕಾ, ಲತಾ, ಸುರೇಶ್ ಕುಮಾರ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಭವಾನಿ, ನಾಗಮಣಿ, ಭವ್ಯಕುಮಾರಿ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.