ವೀರಾಜಪೇಟೆ, ಜೂ. 18: ವಾಹನಗಳನ್ನು ಚಾಲನೆ ಮಾಡುವಂತಹÀ ವಿದ್ಯಾರ್ಥಿಗಳಿಗೆ 18 ವರ್ಷ ತುಂಬಿರಬೇಕು. ವಿದ್ಯಾರ್ಥಿ ಹೆಸರಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಇರಬೇಕು. ಜೊತೆಗೆ ಹಾಗೂ ಟ್ರಾಫಿಕ್ ಬಗ್ಗೆ ನಿಯಮ ನಿಬಂಧನೆಗಳು ತಿಳಿದಿದ್ದರೆ ಮಾತ್ರ ವಾಹನ ಚಾಲಿಸಬಹುದು ಎಂದು ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಹೇಳಿದರು.

ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಹಾಗೂ ನಗರ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ರಸ್ತೆ ಸುರಕ್ಷತೆಯ ಬಗ್ಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಅವರು ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಹಾಕಿರಬೇಕು. ಚಾಲನೆಯಲ್ಲಿ ಮುನ್ನೆಚ್ಚರಿಕೆ ವಹಿಸುವದರೊಂದಿಗೆ ಅತೀ ವೇಗದ ಚಾಲನೆಗೆ ಕಡಿವಾಣವಿರಬೇಕು. ಪೋಷಕರು ತಮ್ಮ ಮಕ್ಕಳಿಗೆ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಮಾತ್ರ ವಾಹನ ಚಾಲನೆಗೆ ಅವಕಾಶ ನೀಡಬೇಕು. ಮಕ್ಕಳಿಂದ ಅಪಘಾತಗಳು ನಡೆದಲ್ಲಿ ಪೋಷಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ. ವಿದ್ಯಾರ್ಥಿಗಳು ಟ್ರಾಫಿಕ್ ನಿಯಮಗಳ ಕುರಿತು ಪೊಲೀಸ್‍ನ ಟ್ರಾಫಿಕ್ ವಿಭಾಗದಿಂದ ಮಾಹಿತಿ ಪಡೆಯಲು ಇಲಾಖೆ ಅವಕಾಶ ಮಾಡಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಶ್ಯಪ್ ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.