ಸೋಮವಾರಪೇಟೆ, ಜೂ. 16: ಸೋಮವಾರಪೇಟೆ ವಿಭಾಗದಲ್ಲಿ ಈಗಷ್ಟೇ ಮಳೆ ಸುರಿಯುತ್ತಿದೆ. ಕಳೆದ ನಾಲ್ಕು ದಿನಗಳಿಂದ ಈ ಭಾಗಕ್ಕೆ ಸಾಧಾರಣ ಮಳೆಯಾಗುತ್ತಿದ್ದು, ಅದಾಗಲೇ ಗ್ರಾಮೀಣ ಪ್ರದೇಶದ ರಸ್ತೆಗಳು ಗುಂಡಿ ಬೀಳುತ್ತಿವೆ.
ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಹಲವಷ್ಟು ರಸ್ತೆಗಳು ಸಾಧಾರಣ ಮಳೆಗೆ ಕೆಸರಿನ ಹೊಂಡಗಳಂತೆ ಮಾರ್ಪಾಡಾಗಿದ್ದು, ಗ್ರಾಮೀಣ ಭಾಗದ ಸಣ್ಣಪುಟ್ಟ ರಸ್ತೆಗಳ ಸ್ಥಿತಿಯಂತೂ ತೀರಾ ಹದಗೆಡುತ್ತಿದೆ.
ಪಟ್ಟಣ ಸಮೀಪದ ತೋಳೂರುಶೆಟ್ಟಳ್ಳಿ, ಹಾನಗಲ್ಲು, ಚೌಡ್ಲು, ಬೇಳೂರು, ಗೌಡಳ್ಳಿ, ನೇರುಗಳಲೆ, ಶಾಂತಳ್ಳಿ, ಐಗೂರು, ದೊಡ್ಡಮಳ್ತೆ, ಕಿರಗಂದರೂ, ಬೆಟ್ಟದಳ್ಳಿ ಸೇರಿದಂತೆ ಇನ್ನಿತರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಲವಷ್ಟು ಒಳ ರಸ್ತೆಗಳು ಸುಗಮ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸುತ್ತಿದ್ದು, ಇಲಾಖೆಗಳು ಕನಿಷ್ಟ ಪಕ್ಷ ರಸ್ತೆಯ ಗುಂಡಿಗಳನ್ನೂ ಮುಚ್ಚದಿರುವದು ಅಧ್ವಾನಕ್ಕೆ ಕಾರಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ಮಳೆಗಾಲದ ವಾತಾವರಣ ನಿರ್ಮಾಣವಾಗಿದ್ದು, ಇನ್ನೂ ಸಹ ಭಾರೀ ಮಳೆ ಬಿದ್ದಿಲ್ಲ. ಸಾಧಾರಣ ಮಳೆಗೆ ರಸ್ತೆಗಳು ಹೊಂಡಮಯ ವಾಗಿದ್ದು, ಮುಂದಿನ ದಿನಗಳಲ್ಲಿ ನಿರಂತರ ಮಳೆ ಸುರಿದರೆ ರಸ್ತೆಗಳು ಸಂಚಾರಕ್ಕೆ ಉಳಿಯುತ್ತವೆಯೋ ಎಂಬ ಅನುಮಾನ ಈಗಲೇ ಮೂಡಲಾರಂಭಿಸಿದೆ.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಈಗಾಗಲೇ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಗೆ ತಲಪಿವೆ. ತೋಳೂರುಶೆಟ್ಟಳ್ಳಿ-ಚಿಕ್ಕತೋಳೂರು ರಸ್ತೆ, ಸಿಂಗನಳ್ಳಿ, ವನಗೂರುಕೊಪ್ಪ, ದೊಡ್ಡತೋಳೂರು, ಕಂಬಳ್ಳಿ ಗ್ರಾಮದ ರಸ್ತೆಗಳು ಈಗಾಗಲೇ ಹೊಂಡಮಯವಾಗಿದೆ.
ಚಿಕ್ಕತೋಳೂರು ರಸ್ತೆಯಂತೂ ಡಾಂಬರು ಕಾಣದೇ ಕೆಲ ದಶಕಗಳೇ ಕಳೆದಿದ್ದು, ಇಲ್ಲಿನವರ ರಸ್ತೆಯ ಬೇಡಿಕೆ ‘ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ’ ಆಗಿದೆ. ಇನ್ನು ಇದೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಡಾಮರು ಹಾಕಿದ್ದ ರಸ್ತೆಗಳು ಇದೀಗ ನಡೆದಾಡಲೂ ಅಯೋಗ್ಯವಾದ ಸ್ಥಿತಿಗೆ ತಲಪಿವೆ.
ಹಾನಗಲ್ಲು ಗ್ರಾಮ ಪಂಚಾಯಿತಿಯ ಹಾನಗಲ್ಲು ಶೆಟ್ಟಳ್ಳಿ ರಸ್ತೆ, ಮಾಟ್ನಳ್ಳಿ-ಆದಿಗಳಲೆ ರಸ್ತೆ, ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ ದೇವಾಲಯ ಹಿಂಬದಿಯಿಂದ ಆಲೇಕಟ್ಟೆ ಸಂಪರ್ಕ ರಸ್ತೆ, ಕಾನ್ವೆಂಟ್ ಬಾಣೆ ರಸ್ತೆಗಳೂ ಸಹ ಗುಂಡಿಗಳಿಂದ ಕೂಡಿವೆ. ಲೋಕೋಪ ಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಸ್ತೆಗಳು ತಕ್ಕಮಟ್ಟಿಗೆ ಸಂಚಾರಕ್ಕೆ ಯೋಗ್ಯವಾಗಿದ್ದರೆ, ಜಿಲ್ಲಾ ಪಂಚಾಯಿತಿಯ ರಸ್ತೆಗಳು ಮಾತ್ರ ನಿರ್ವಹಣೆಯಿಲ್ಲದೇ ಸಾರ್ವಜನಿಕರಿಗೆ ತೊಂದರೆ ತಂದೊಡ್ಡುತ್ತಿವೆ.
2017ರಲ್ಲಿ ಕೊಡಗು ಪ್ಯಾಕೇಜ್ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದ ಹಲವಷ್ಟು ರಸ್ತೆ ಕಾಮಗಾರಿ ಇಂದಿಗೂ ಪ್ರಾರಂಭ ವಾಗದಿರುವ ಬಗ್ಗೆ ತಿಳಿದುಬಂದಿದೆ. ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ನೂತನ ರಸ್ತೆ ಡಾಂಬರು, ಕಾಂಕ್ರಿಟೀಕರಣ ಕೈಗೊಳ್ಳಲು ಅಸಾಧ್ಯವಾಗಿದೆ. ಈ ಹಿನ್ನೆಲೆ ಪ್ರಸಕ್ತ ಮಳೆಗಾಲವನ್ನು ಹೊಂಡಗುಂಡಿಗಳ ರಸ್ತೆಯಲ್ಲೇ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳ ಬದಿಯಲ್ಲಿ ಕಾಡು ಬೆಳೆದಿದ್ದು, ಇದನ್ನು ತೆರವುಗೊಳಿಸುವ ಕಾರ್ಯ ಆಗಬೇಕಿದೆ. ಇದರೊಂದಿಗೆ ಅಗತ್ಯ ಕಡೆಗಳಲ್ಲಿ ಮೋರಿ ದುರಸ್ತಿ, ಶೋಲ್ಡರ್ ನಿರ್ಮಾಣವೂ ನಡೆಯಬೇಕಿದೆ.
ಮಳೆಗಾಲದಲ್ಲಿ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಲೋಕೋಪಯೋಗಿ ಇಲಾಖೆಯಿಂದ ಕ್ರಮ ವಹಿಸಲಾಗಿದೆ. ರಸ್ತೆಯ ಬದಿಗಳಲ್ಲಿ ಕಾಡುತೆರವು, ಚರಂಡಿ ನಿರ್ಮಾಣ, ಜಂಗಲ್‍ಕಟ್ಟಿಂಗ್‍ಗೆ ಕ್ರಿಯಾಯೋಜನೆ ತಯಾರಿಸಿ ‘ಪ್ರೋಗ್ರಾಂ ಲಿಸ್ಟ್’ನಲ್ಲಿ ಸೇರಿಸಲಾಗಿದೆ. ಇಲಾಖೆಯ ಸೂಪರಿಂಡೆಂಟ್ ಇಂಜಿನಿಯರ್ ಕಚೇರಿಗೆ ಕಡತ ಕಳುಹಿಸಲಾಗಿದ್ದು, ಅಲ್ಲಿಂದ ಅನುಮೋದನೆಗೊಂಡ ತಕ್ಷಣ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಪಿಡಬ್ಲ್ಯುಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಮಳೆಹಾನಿ ಪರಿಹಾರ ನಿಧಿಯಡಿ ಹದಗೆಟ್ಟ ರಸ್ತೆಗಳ ದುರಸ್ತಿಗೆ ಕ್ರಮವಹಿಸಲಾಗುವದು. ಎರಡನೇ ಪಟ್ಟಿಯಲ್ಲಿ ಹಾನಿಗೀಡಾದ ರಸ್ತೆಗಳನ್ನು ಸೇರಿಸಲಾಗಿದೆ. ಚರಂಡಿಗಳು ದುರಸ್ತಿಗೊಂಡಿದ್ದರೆ ತಕ್ಷಣ ಸರಿಪಡಿಸಲಾಗುವದು. ರಸ್ತೆಗಳಲ್ಲಿ ಗುಂಡಿಗಳಿದ್ದರೆ ಸದ್ಯಕ್ಕೆ ಗ್ರಾವೆಲ್ ಅಥವಾ ವೆಟ್‍ಮಿಕ್ಸ್ ಹಾಕಿ ಮುಚ್ಚಲಾಗುವದು. ತೀರಾ ಹದಗೆಟ್ಟ ರಸ್ತೆಗಳನ್ನು ಸರ್ವೆ ಮಾಡಿ ಪಟ್ಟಿ ತಯಾರಿಸುತ್ತೇವೆ. ರಸ್ತೆಗಳ ಬದಿಯಲ್ಲಿ ಗಿಡಗಂಟಿ ತೆರವು, ಚರಂಡಿ, ಶೋಲ್ಡರ್ ಕಾಮಗಾರಿಗೆ ನಿರ್ವಹಣಾ ಅನುದಾನದಲ್ಲಿ ಹಣ ಒದಗಿಸಿ ಕೊಳ್ಳಲಾಗುವದು ಎಂದು ಜಿ.ಪಂ. ಪ್ರಭಾರ ಕಾರ್ಯಪಾಲಕ ಅಭಿಯಂತರ ವೀರೇಂದ್ರ ತಿಳಿಸಿದ್ದಾರೆ.
- ವಿಜಯ್ ಹಾನಗಲ್