ಸಿದ್ದಾಪುರ, ಜೂ. 15: ಕರಡಿಗೋಡು ಗ್ರಾಮದಲ್ಲಿ ರಾತೋರಾತ್ರಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿಯು ಕಳಪೆಯಾಗಿದೆ ಎಂದು ಗ್ರಾಮಸ್ಥರು ಗ್ರಾ.ಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಬಹುತೇಕ ಹದಗೆಟ್ಟಿದ್ದು, ರಸ್ತೆಯನ್ನು ಡಾಮರೀಕರಣ ಮಾಡಬೇಕೆಂದು ಗ್ರಾಮಸ್ಥರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಕಳೆದ ಬೇಸಿಗೆಗಾಲದಲ್ಲಿ ಕಾಮಗಾರಿ ಕೈಗೊಳ್ಳಬೇಕಿದ್ದ ಗ್ರಾ.ಪಂ ಇದೀಗ ಮಳೆಗಾಲ ಆರಂಭವಾದ ಸಮಯದಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ರಾತೋರಾತ್ರಿ ಮಳೆಯಲ್ಲಿ ಕಾಮಗಾರಿಯನ್ನು ಕೈಗೊಂಡು ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ಕಾಮಗಾರಿಯು ಕಳಪೆಯಾಗಿದ್ದು, ಕಲ್ಲುಗಳು ಮೇಲೆ ಬಂದಿದೆ. ಕೆಲವೊಂದೆಡೆ ಸಣ್ಣ ಗುಂಡಿಗಳಿದ್ದು, ನಿರ್ಮಾಣವಾದ ರಸ್ತೆಯು ಎತ್ತರದಿಂದ ಕೂಡಿದೆ. ಕತ್ತಲೆಯಲ್ಲಿ ಕಾಮಗಾರಿ ಮಾಡಿರುವ ದನ್ನು ಗ್ರಾಮಸ್ಥರು ಖಂಡಿಸಿದ್ದು, ಕ್ರಿಯಾಯೋಜನೆಯಲ್ಲಿ ಅತ್ಯಗತ್ಯವಿರುವ ಕಾಮಗಾರಿಗಳ ಹೆಸರನ್ನು ನೀಡಲಾಗಿದೆ. ಆದರೆ ಅವೈಜ್ಞಾನಿಕವಾದ ಕಾಮಗಾರಿ ಯಿಂದಾಗಿ ಗ್ರಾ.ಪಂ ಹಣ ಪೋಲಾಗುತ್ತಿದ್ದು, ಗ್ರಾ.ಪಂ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕೂಡ ಇದೇ ರೀತಿಯ ಕಳಪೆ ಕಾಮಗಾರಿಯನ್ನು ನಡೆಸಲಾಗಿ, ಕಾಂಕ್ರೀಟ್ ರಸ್ತೆಯು ಗುಂಡಿಗಳಾಗಿತ್ತು. ಬಳಿಕ ಟಾರಿಂಗ್ ಮಾಡುವ ಸಂದರ್ಭ ಕಾಂಕ್ರೀಟ್ ರಸ್ತೆಯ ಮೇಲೆ ಡಾಮರೀಕರಣ ಮಾಡಲಾಗಿತ್ತು. ಇದೀಗ ಕೈಗೊಂಡ ಕಾಮಗಾರಿಯು ಕೂಡ ಮತ್ತೆ ಗುಂಡಿಗಳಾಗುವ ಸಾಧ್ಯತೆ ಇದೆ.

ಕರಡಿಗೋಡು ರಸ್ತೆಯಲ್ಲಿ ಇತ್ತೀಚೆಗೆ ಇಂಟರ್ ಲಾಕ್ ಅಳವಡಿಸಲಾಗಿದ್ದು, ಈಗಾಗಲೇ ಇಂಟರ್ ಲಾಕ್ ಕಿತ್ತು ಬರುತ್ತಿದೆ. ಭಾರೀ ವಾಹನ ಸಂಚರಿಸುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಇಂಟರ್ ಲಾಕ್ ಅಳವಡಿಸಿದೆ ಎಂದು ಗ್ರಾಮಸ್ಥರ ಪರವಾಗಿ ಕೃಷ್ಣ ಹಾಗೂ ಬೈಜು ಆರೋಪಿಸಿದ್ದಾರೆ. ಕಾಮಗಾರಿಗೆ ಹಣ ಪಾವತಿ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.