ಮಡಿಕೇರಿ, ಜೂ. 15: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಹದಗೆಡುತ್ತಿರುವದನ್ನು ಆಕ್ಷೇಪಿಸಿ ಆ ವಿಭಾಗದ ಗ್ರಾಮಸ್ಥರು ಶ್ರೀಮಂಗಲದಲ್ಲಿರುವ ಸೆಸ್ಕ್‍ನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಕೇವಲ ಈ ವರ್ಷ ಮಾತ್ರವಲ್ಲ ಇಲ್ಲಿ ನಿರಂತರವಾಗಿ ಸಮಸ್ಯೆ ಎದುರಾಗುತ್ತಿದ್ದರೂ ಇತ್ತ ಯಾರೂ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಇದೀಗ ಜೂನ್ 2ರಿಂದ ಈ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆಯೇ ಇಲ್ಲದೆ ಪ್ರಸ್ತುತದ ತಾಂತ್ರಿಕ ಯುಗದಲ್ಲೂ ಜನತೆ ಶಿಲಾಯುಗದ ರೀತಿಯಲ್ಲಿ ಜೀವನ ಸಾಗಿಸುವಂತಾಗಿದೆ ಎಂಬ ಆಕ್ಷೇಪ ವ್ಯಕ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ತಾ. 17ರಂದು (ನಾಳೆ) ಬೆಳಿಗ್ಗೆ 10 ಗಂಟೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಶ್ರೀಮಂಗಲ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಂಡಿರುವದಾಗಿ ಸಾರ್ವಜನಿಕರ ಪರವಾಗಿ ಬಿರುನಾಣಿ ಗ್ರಾ.ಪಂ. ಸದಸ್ಯ ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ ಅವರು ತಿಳಿಸಿದ್ದಾರೆ. ಸಮಸ್ಯೆಗಳ ಕುರಿತಾಗಿ ಜಿಲ್ಲಾಧಿಕಾರಿಗಳು, ಸೆಸ್ಕ್‍ನ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಸಂಬಂಧಿಸಿದವರಿಗೆ ಮಾಹಿತಿಯನ್ನೂ ನೀಡಲಾಗಿದೆ. ಈ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಪಟ್ಟಿ ಇಂತಿವೆ:

ಕೇವಲ ಬೆರಳೆಣಿಕೆಯ ಲೈನ್‍ಮೆನ್‍ಗಳು ಮಾತ್ರ ಸೇವೆಗೆ ಲಭ್ಯವಿದ್ದು, ಅವರು ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಹಿಂದೆ ಚಳವಳಿ ನಡೆಸಿದಾಗ ಟಿ.ಎಸ್ಟೇಟ್ ಮಧ್ಯಭಾಗದ ಟಿ. ಕಾರ್ಖಾನೆಯ ಮುಖಾಂತರ 11 ಕೆ.ವಿ. ಲೈನ್ ಹಾದುಹೋಗುತ್ತಿದ್ದು, ಈ ಮಾರ್ಗವನ್ನು ಬದಲಾಯಿಸುವಂತೆ ಒತ್ತಾಯಿಸಿದ ಮೇರೆ ಅಂದಿನ ಅಧಿಕಾರಿಗಳು ಮಾರ್ಗ ಬದಲಾಯಿಸುವ ಭರವಸೆ ನೀಡಿದ್ದರೂ ಇದುವರೆಗೂ ಯಾವದೇ ಕ್ರಮ ಕೈಗೊಂಡಿರುವದಿಲ್ಲ. ಬಿರುನಾಣಿ ಭಾಗಕ್ಕೆ ಬಂದಿರುವ 11 ಕೆ.ವಿ. ವಿದ್ಯುತ್ ಲೈನ್ ಸುಮಾರು 50 ವರ್ಷಕ್ಕೆ ಹಿಂದಿನ ಬೆಟ್ಟ ಹಾಗೂ ಕಾಡು ದಾರಿಯಿಂದ ಕೂಡಿದ ಲೈನಾಗಿದ್ದು, ಇದರ ದುರಸ್ಥಿಗೆ ಹೋಗಲು ದಾರಿ ಇರುವದಿಲ್ಲ ಹಾಗೂ ಟಿ. ಎಸ್ಟೇಟ್‍ನ ಒಳಗೆ ಸಾರ್ವಜನಿಕರಿಗೆ ಮತ್ತು ಕೆ.ಇ.ಬಿ.ಯವರಿಗೆ ಪ್ರವೇಶವಿರುವದಿಲ್ಲ.

ತೆರಾಲು ಗ್ರಾಮ ನಿರಂತರ ಕತ್ತಲೆಯಲ್ಲಿ ಇರುವದರಿಂದ ಬದಲಿ ಲಿಂಕ್ ಲೈನ್ ವ್ಯವಸ್ಥೆಗೆ ಸಂಬಂಧಪಟ್ಟವರಿಂದ ಪ್ಲಾನ್ ತಯಾರಿಸಿ ನಾಲ್ಕೈದು ವರ್ಷವಾದರೂ ಇನ್ನೂ ಅದು ಜಾರಿಗೊಂಡಿರುವದಿಲ್ಲ.

ಬಿರುನಾಣಿ ಎಕ್ಸ್‍ಪ್ರೆಸ್ ಲೈನ್ ಕೆಲಸ ಕಳಪೆ ಮಟ್ಟದ್ದಾಗಿದ್ದು, ಇದನ್ನು ಇನ್ನೂ ಪೂರ್ಣಗೊಳಿಸಿರುವದಿಲ್ಲ. ಶ್ರೀಮಂಗಲಕ್ಕೆ ಸರಬರಾಜಾಗುತ್ತಿರುವ 33 ಕೆ.ವಿ.ಯು ಅತ್ಯಂತ ಪುರಾತನ ಕಾಲ ಅಂದರೆ 50ರಿಂದ 60 ವರ್ಷ ಹಳೆಯ ಲೈನಾಗಿದ್ದು, ಇದರ ಇನ್ಪುಟ್ ಕ್ಷಮತೆ ಕಡಿಮೆ ಇದ್ದು, ಇದನ್ನು ಉನ್ನತೀಕರಣಗೊಳಿಸಬೇಕಿದೆ. ಶ್ರೀಮಂಗಲದಲ್ಲಿ ಒಂದೊಂದು ಮಂಡಳ ವ್ಯಾಪ್ತಿಗಾದರೂ ಒಂದೊಂದು ಫೀಡರ್ ಇರಬೇಕಾಗಿತ್ತು. ಆದರೆ ಕೇವಲ ಒಂದೋ ಎರಡೋ ಫೀಡರ್‍ನಿಂದ ಕೆಲಸ ನಿರ್ವಹಿಸುತ್ತಿದ್ದು, ಯಾವದೋ ಒಂದು ಮೂಲೆಯಲ್ಲಿ ಸಣ್ಣ ತೊಂದರೆಯಾದರೂ ಎರಡು ಮೂರು ಮಂಡಳಿ ವ್ಯಾಪ್ತಿಯ ಅಂದರೆ 8ರಿಂದ 10 ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಳ್ಳುತ್ತದೆ.

ಶ್ರೀಮಂಗಲ ವ್ಯಾಪ್ತಿಯ ಎಲ್ಲಾ ಲೈನ್‍ಗಳು ತುಕ್ಕು ಹಿಡಿದಿದ್ದು ಹಾಗೂ ಪಾಚಿಕಟ್ಟಿದ್ದು, ಆಗಾಗ ತುಂಡಾಗಿ ಕೆಳಗೆ ಬೀಳುವದರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಪದೇ ಪದೆ ಅಪಾಯ ಎದುರಾಗುತ್ತಿದೆ. ಆನೆ ಕಾರಿಡಾರ್‍ಗೆ ಕಂಬಗಳನ್ನು ಒದಗಿಸುತ್ತಿದ್ದರೂ ಕೆಲವಾರು ಕಡೆಗಳಲ್ಲಿ ಎಲ್.ಟಿ. ಲೈನ್ ನೆಲದ ಮೇಲೆ ಬಿದ್ದಿದೆ. ಇದರ ಫೋಟೋವನ್ನು ಜೆ.ಇ. ಹಾಗೂ ಎ.ಇ.ಇ. ಗೋಣಿಕೊಪ್ಪ ಇವರಿಗೆ ಸಲ್ಲಿಸಲಾಗಿದೆ. ಹಾಗೂ 11 ಕೆ.ವಿ. ಮಾರ್ಗ ಕೈಗೆ ಎಟಕುವಂತಿದೆ. ವಿದ್ಯುತ್ ಮಾರ್ಗದಲ್ಲಿ ಹಲವಾರು ವರ್ಷಗಳಿಂದ ಜಂಗಲ್ ಕಟ್ಟಿಂಗ್ ಮಾಡದೆ ಮಾರ್ಗಗಳನ್ನು ನಿರ್ವಹಿಸದೆ ಕಾಡಿನ ಮಧ್ಯೆ ಲೈನ್‍ಗಳು ಸಾಗಿದ್ದು, ಸಾರ್ವಜನಿಕರೇ ಸಾಧ್ಯವಾದಷ್ಟು ಮಟ್ಟಿಗೆ ಕಾಡನ್ನು ಕಡಿಯುತ್ತಾರೆ.

ಜೆ.ಇ. ಹಾಗೂ ಲೈನ್‍ಮೆನ್‍ಗಳು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಫೋನ್ ಕಾಲ್‍ಗಳನ್ನು ಸ್ವೀಕರಿಸುವದಿಲ್ಲ. ಖುದ್ದಾಗಿ ಹೋಗಿ ಕೇಳಿದರೆ ಉಡಾಫೆಯಿಂದ ಕೆಲಸದ ಒತ್ತಡವಿದೆ ನೀವು ಬೇಕಾದರೆ ಪ್ರತಿಭಟನೆ ಮಾಡಿ ನಾವೇನು ಮಾಡುವದು ಎಂಬ ಉತ್ತರ ನೀಡುತ್ತಾರೆ ಎಂದು ಆಕ್ರೋಶ ಕೇಳಿಬಂದಿದೆ.