ಮಡಿಕೇರಿ, ಜೂ.15: ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಬಿ.ಆರ್.ಜೋಯಪ್ಪ ಅವರು ಬರೆದ ‘ಕಾಟಿಬೆಟ್ಟದ ಕಥೆಗಳು’ ಪುಸ್ತಕ ಲೋಕಾರ್ಪಣೆ ಸಮಾರಂಭವು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಂಗಕರ್ಮಿ ಶಿವಮೊಗ್ಗದ ಕವಿ ಕಾವ್ಯ ಟ್ರಸ್ಟ್‍ನ ಪ್ರಸನ್ನ ಅವರು ಮನುಷ್ಯನ ಜೀವನದಲ್ಲಿ ಪ್ರಕೃತಿ ಮತ್ತು ಪುರುಷ ಸಂಬಂಧದ ಬಾಂಧವ್ಯವನ್ನು ಈ ಪುಸ್ತಕವು ತೋರಿಸಿಕೊಡುತ್ತದೆ. ಎಂದರು.

ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್ ಮಾತನಾಡಿ ಕಾಟಿಬೆಟ್ಟದ ಕಥೆಗಳು ಪುಸ್ತಕದಲ್ಲಿ ಬಿ.ಆರ್. ಜೋಯಪ್ಪ ಅವರು ತಮ್ಮ ಬಾಲ್ಯದ ತಮ್ಮ ಮನೆಯ ಪರಿಸರದ ಸುತ್ತಮುತ್ತಲಿನ ಆಗು ಹೋಗುಗಳನ್ನು ಕಥೆಯ ರೂಪದಲ್ಲಿ ಅನಾವರಣ ಗೊಳಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರಯತ್ನಶೀಲ ಬದುಕಿನಲ್ಲಿ ಯಶಸ್ಸಿನ ಗುಟ್ಟು ಅಡಗಿದೆ ಎಂಬದು ಕಾಟಿಬೆಟ್ಟದ ಕಥೆಗಳು ಪುಸ್ತಕದಲ್ಲಿ ಅಡಕವಾಗಿದೆ ಎಂದರು.

ಕಾಟಿಬೆಟ್ಟದ ಕಥೆಗಳ ಲೇಖಕ ಬಿ.ಆರ್.ಜೋಯಪ್ಪ ಮಾತನಾಡಿದರು.

ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಬೆಳವಣಿಗೆ ಆಗಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ಚಿಂತನ-ಚಿತ್ತಾರ ಪ್ರಕಾಶನದ ಡಿ.ನಿಂಗರಾಜು ಚಿತ್ತಣ್ಣನವರ್, ಇತರರು ಇದ್ದರು. ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಪರ್ಡ್ ಕ್ರಾಸ್ತಾ ನಿರೂಪಿಸಿದರು.