ಪ್ರತಿಭಟನೆಯ ಎಚ್ಚರಿಕೆ
ಸೋಮವಾರಪೇಟೆ, ಜೂ. 16: ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಉದ್ಯಾನವನಗಳು ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರ ಉಪಯೋಗದಿಂದ ದೂರ ಉಳಿದಿದ್ದು, ಮುಂದಿನ 7 ದಿನಗಳೊಳಗೆ ಸರಿಪಡಿಸದಿದ್ದಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಕರವೇ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಆನೆಕೆರೆ ಬಳಿಯಲ್ಲಿ ಮತ್ತು ಮಹದೇಶ್ವರ ಬಡಾವಣೆಯಲ್ಲಿ ಪಂಚಾಯಿತಿ ವತಿಯಿಂದ ನಿರ್ಮಿಸ ಲಾಗಿರುವ ಎರಡು ಉದ್ಯಾನವನಗಳು ನಿರ್ವಹಣೆಯಿಲ್ಲದೇ ಪಾಳು ಬಿದ್ದಿದೆ. ಉದ್ಯಾನವನದೊಳಗಿರುವ ಆಟಿಕೆ ಸಾಮಗ್ರಿಗಳು ಮುರಿದು ಬಿದ್ದಿದ್ದು, ಕಬ್ಬಿಣದ ಪೈಪ್‍ಗಳು ತುಕ್ಕು ಹಿಡಿದು ಅಪ್ರಯೋಜಕವಾಗಿವೆ.
ಇವುಗಳನ್ನು ತಕ್ಷಣ ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ನಗರಾಧ್ಯಕ್ಷ ಮಂಜುನಾಥ್ ಅವರುಗಳು ಆಗ್ರಹಿಸಿದರು. ಆನೆಕೆರೆಯ ಉದ್ಯಾನವನ ಪುಂಡ ಪೋಕರಿಗಳ ಅಡ್ಡೆಯಾಗಿದ್ದು, ಎಲ್ಲೆಂದರಲ್ಲಿ ಮದ್ಯದ ಬಾಟಲ್‍ಗಳನ್ನು ಎಸೆಯಲಾಗಿದೆ. ಪ್ಲಾಸ್ಟಿಕ್ ಬಾಟಲ್, ಲೋಟಗಳು ಅಲ್ಲಲ್ಲಿ ಕಂಡುಬರುತ್ತಿದ್ದು, ಶುಚಿತ್ವ ಇಲ್ಲದಂತಾಗಿದೆ. ಈ ಬಗ್ಗೆ ಮುಂದಿನ 7 ದಿನಗಳೊಳಗೆ ಕ್ರಮ ವಹಿಸಬೇಕೆಂದು ಮುಖ್ಯಾಧಿಕಾರಿ ನಟರಾಜ್ ಅವರನ್ನು ಒತ್ತಾಯಿಸಿದರು.
ಈ ಸಂದರ್ಭ ಕರವೇ ತಾಲೂಕು ಕಾರ್ಯದರ್ಶಿ ಹಸನಬ್ಬ, ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಪದಾಧಿಕಾರಿಗಳಾದ ಮಹಮ್ಮದ್ ಶಫಿ, ಹೆಚ್.ಡಿ. ಸಂತೋಷ್, ದಿವಾಕರ್, ಗುರುಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.