ಟಿ ಎರಡು ಮೊಕದ್ದಮೆ ದಾಖಲು ಟಿ ಶಕ್ತಿ ವರದಿ ಫಲಶೃತಿ ಮಡಿಕೇರಿ, ಜೂ. 15: ಹತ್ತು ದಿನಗಳ ಹಿಂದೆ ವಿಶ್ವ ಪರಿಸರ ದಿನಾಚರಣೆ ದಿನವೇ; ಇಲ್ಲಿಗೆ ಸಮೀಪದ ಕೆ. ನಿಡುಗಣೆ ಗ್ರಾಮದಲ್ಲಿ 800ಕ್ಕೂ ಅಧಿಕ ಮರಗಳನ್ನು ಮಾರಣ ಹೋಮಗೈದಿದ್ದ ಪ್ರಕರಣ ಸಂಬಂಧ; ಮಡಿಕೇರಿ ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿಯ ಅಮಾನತು ಬೆನ್ನಲ್ಲೇ; ಇದೀಗ ಇಲಾಖೆಯು ಎರಡು ಮೊಕ್ಕದ್ದಮೆಗಳನ್ನು ದಾಖಲಿಸಿಕೊಂಡಿದೆ.ಕರ್ನಾಟಕ ಗೃಹ ನಿರ್ಮಾಣ ಅಭಿವೃದ್ಧಿ ಮಂಡಳಿಗೆ ಜಾಗ ನೀಡಿಕೆಯೆ ನಡುವೆ ಮರಗಳನ್ನು ಕಡಿದುರುಳಿಸುತ್ತಿದ್ದ ಕುರಿತು; ವಿಶ್ವ ಪರಿಸರ ದಿನಾಚರಣೆ ದಿನವಾದ ತಾ. 5ರಂದು ‘ಶಕ್ತಿ’ ಪ್ರತ್ಯಕ್ಷ ವರದಿ ಪ್ರಕಟಿಸಿತ್ತು. ಆ ಬೆನ್ನಲ್ಲೇ ಮಾಜೀ ಸಚಿವ ಯಂ.ಸಿ. ನಾಣಯ್ಯ ಅವರು ಸೂಕ್ತ ತನಿಖೆಗೆ ಆಗ್ರಹಿಸಿದ್ದರು.ರಾಜ್ಯದ ಮುಖ್ಯಮಂತ್ರಿಗಳೇ ಈ ಬಗ್ಗೆ ಆಕ್ಷೇಪಿಸಿ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರು. ‘ಶಕ್ತಿ’ ವರದಿಯ ಫಲಶೃತಿಯೆಂಬಂತೆ; ಇದೀಗ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತನಿಖೆ ಕೈಗೊಂಡು ಸಂಬಂಧಿಸಿದ ಜಾಗದಲ್ಲಿ 738 ಮರಗಳನ್ನು; ಇದೀಗ ಅಮಾನತುಗೊಂಡಿರುವ ಅಧಿಕಾರಿಯ ಅನುಮತಿ ಮೇರೆಗೆ ಕಡಿದಿರುವದಾಗಿ ಖಚಿತಪಡಿಸಿದ್ದಾರೆ. ಅಲ್ಲದೆ ಆ ಹೊರತಾಗಿಯೂ ಅಕ್ರಮವಾಗಿ 73 ಮರಗಳನ್ನು ಕಡಿದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಹೀಗಾಗಿ ಜಾಗವನ್ನು ಅಭಿವೃದ್ಧಿಗೊಳಿಸುತ್ತಿರುವ ಬೆಂಗಳೂರು ಖಾಸಗಿ ಉದ್ದಿಮೆದಾರರು ಮತ್ತು ಇಲ್ಲಿ ಮರಗಳ ಹನನಗೊಳಿಸಿರುವ ವ್ಯಕ್ತಿಗಳ ವಿರುದ್ಧ ಪ್ರತ್ಯೇಕ ಪ್ರಕರಣದೊಂದಿಗೆ ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.