ಸೋಮವಾರಪೇಟೆ, ಜೂ. 16: ನಿಯಮಿತವಾಗಿ ರಕ್ತದಾನ ಮಾಡುವದರಿಂದ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದು ಮಡಿಕೇರಿ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಹೇಳಿದರು.

ಇಲ್ಲಿನ ಜೇಸೀ ಸಂಸ್ಥೆಯ ವತಿಯಿಂದ, ರೆಡ್‍ಕ್ರಾಸ್ ಮತ್ತು ರಕ್ತನಿಧಿ ಘಟಕದ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ದಿನಾಚರಣೆ-ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಕ್ತದಾನ ಎಲ್ಲಕ್ಕಿಂತಲೂ ಶ್ರೇಷ್ಠವಾಗಿದ್ದು, ಜೀವ ಉಳಿಸುವ ಮಹತ್ಕಾರ್ಯವಾಗಿದೆ. ಆರೋಗ್ಯ ವಂತ ಪುರುಷರು ಪ್ರತಿ 3 ಹಾಗೂ ಮಹಿಳೆಯರು 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಗೆ ಅವಕಾಶ ಒದಗಲಿದ್ದು, ಆರೋಗ್ಯವೂ ಸುಸ್ಥಿತಿಯಲ್ಲಿ ಇರುತ್ತದೆ ಎಂದು ಮಾಹಿತಿ ನೀಡಿದರು.

ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾಸ್ಪತ್ರೆಯ ವೈದ್ಯರಾದ ಶಿವಕುಮಾರ್ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ದಾನಿ ಗಳಿಂದಲೇ ರಕ್ತವನ್ನು ಸಂಗ್ರಹಿಸಬೇಕಿದೆ. ಈ ನಿಟ್ಟಿನಲ್ಲಿ ದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸೀ ಸಂಸ್ಥೆ ಅಧ್ಯಕ್ಷ ಪುರುಷೋತ್ತಮ್ ವಹಿಸಿದ್ದರು. ವೇದಿಕೆಯಲ್ಲಿ ವೈದ್ಯಾಧಿಕಾರಿ ಶಿವಪ್ರಸಾದ್, ಡಾ. ಸುಪರ್ಣ ಕೃಷ್ಣಾನಂದ್, ಜೇಸೀ ರೇಟ್ ಅಧ್ಯಕ್ಷೆ ಮಾಯಾ ಗಿರೀಶ್, ಜೇಸೀ ಕಾರ್ಯ ದರ್ಶಿ ಉಷಾರಾಣಿ, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್, ಗಿರೀಶ್, ರೆಡ್‍ಕ್ರಾಸ್ ಸಂಸ್ಥೆಯ ಧನಂಜಯ ಅವರುಗಳು ಉಪಸ್ಥಿತರಿದ್ದರು. ರಕ್ತದಾನಿಗಳಿಗೆ ಪ್ರೇರೇಪಣೆ ನೀಡುವ ದೃಷ್ಟಿಯಿಂದ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಸೋಲೋಮನ್ ಡೇವಿಡ್ ಮತ್ತು ಆರೋಗ್ಯ ಸಹಾಯಕಿ ವನಿತ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಇದೇ ಸಂದರ್ಭ ರಕ್ತದ ಗುಂಪು ಪರೀಕ್ಷೆ ನಡೆಯಿತು.