ಮಡಿಕೇರಿ, ಜೂ.16: ದಕ್ಷಿಣ ಕೊರಿಯಾ ಆಯೋಜಿತ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಡಗು ಮೂಲದ ಇಬ್ಬರು ಕರಾಟೆ ಪಟುಗಳು ಬೆಳ್ಳಿಯ ಪದಕ ಗಳಿಸಿ ಸಾಧನೆ ತೋರಿದ್ದಾರೆ.

ಬೆಂಗಳೂರಿನ ಕೆನ್-ಐ-ಮಾಬುನಿ ಶಿಟೊಯ ಕರಾಟೆ ಸ್ಕೂಲಿನ - ರೆಂಶಿ ಆರ್ ಗಣೇಶನ್ ನೇತೃತ್ವದ ಭಾರತೀಯ ತಂಡವು 3 ಚಿನ್ನ, 6 ಬೆಳ್ಳಿ , 10 ಕಂಚು ಪದಕಗಳನ್ನು ಗೆದ್ದು ದಾಖಲೆಯೊಂದಿಗೆ ಭಾರತ ಟೀಮ್ ಚಾಂಪಿಯನ್ ಶಿಫ್ ನಲ್ಲಿ 3ನೇ ಸ್ಥಾನಗಳಿಸಿದೆ. ತಾ.7 ರಿಂದ 12 ರವರೆಗೆ ಬುಸಾನ್ ಕೊರಿಯಾದಲ್ಲಿ 12 ನೇ ಕೊರಿಯಾ ಓಪನ್ ಮತ್ತು 31 ನೇ ಬುಸಾನ್ ಮೇಯರ್ ಕಪ್ ಇಂಟರ್ ನ್ಯಾಶನಲ್ ಕರಾಟೆ-ಡೊ ಚಾಂಪಿಯನ್ ಶಿಪ್ ಪಂದ್ಯಾಟ ನಡೆಯಿತು.

ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಗೋಣಿಕೊಪ್ಪಲುವಿನ ಬೊಮ್ಮಂಡ ಬೋಪಣ್ಣ ಮತ್ತು ರೇಷ್ಮಾ ದಂಪತಿ ಪುತ್ರಿ ಸ್ವರ ಬೋಪಣ್ಣ ಬಾಲಕಿಯರ ವಿಭಾಗದಲ್ಲಿ ನಡೆದ ಪಂದ್ಯಾವಳಿಯಲ್ಲಿ 2 ಬೆಳ್ಳಿಯ ಪದಕ ಪಡೆದರು. ಅಂತೆಯೇ ಬಾಲಕರ ವಿಭಾಗದಲ್ಲಿ ಬೊಮ್ಮಂಡ ಸಮೃದ್ದ್ ತಮ್ಮಯ್ಯ ಬೆಳ್ಳಿಯ ಪದಕ ಪಡೆದರು. ಸ್ವರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಸಮೃದ್ದ್ ಬೆಂಗಳೂರಿನ ಶಿಶು ಗ್ರಹ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈ ಪಂದ್ಯಾವಳಿಯಲ್ಲಿ 13 ದೇಶಗಳಿಂದ 800 ಕರಾಟೆ ಪಟುಗಳು ಭಾಗವಹಿಸಿದ್ದರು.