ವೀರಾಜಪೇಟೆ, ಜೂ. 16: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಕಣ್ಣಮುಚ್ಚಾಲೆ ಆಡುತ್ತಿದ್ದು ನಿತ್ಯ ಜನಸಾಮಾನ್ಯರ ಜೀವನ ದುಸ್ತರವಾಗುತ್ತಿದೆ ಎಂದು ಕಾಕೋಟುಪರಂಬು ಜಿ.ಪಂ. ಸದಸ್ಯ ಮಂಡೇಟಿರ ಅನಿಲ್ ಅಯ್ಯಪ್ಪ ಆರೋಪಿಸಿದ್ದಾರೆ.
ಪ್ರತಿ ವರ್ಷ ಮಳೆಗಾಲ ಎಂದರೆ ಸಾಕು ಸುತ್ತಮುತ್ತ ಗ್ರಾಮದ ಜನರು ಕತ್ತಲಲ್ಲಿ ಕಳೆಯುವ ಪರಿಸ್ಥಿತಿ ಎದುರಾಗುತ್ತದೆ. ಪಂಚಾಯಿತಿ ಕಚೇರಿ ಬಳಿ ಇರುವ ಟ್ರಾನ್ಸ್ಫಾರಂಗೆ ಪರಿಣಿತಿ ಹೊಂದದ ಲೈನ್ಮ್ಯಾನ್ ಸಂಪರ್ಕವನ್ನು ಅದಲು ಬದಲು ಮಾಡಿದ ಪರಿಣಾಮ ಹೈವೋಲ್ಟೆಜ್ ಬಂದು ಟ್ರಾನ್ಸ್ಫಾರಂ ಸುಟ್ಟುಹೋಗಿದೆ. ಬದಲಿ ವ್ಯವಸ್ಥೆ ಮಾಡದ ಕಾರಣ ಕಳೆದ 10 ದಿನಗಳಿಂದ ಗ್ರಾಮದಲ್ಲಿರುವ ಮನೆಗಳಿಗೆ ಗ್ರಾಮ ಪಂಚಾಯಿತಿ ಯಿಂದ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಕಳೆದ 4 ವರ್ಷಗಳ ಹಿಂದೆಯೇ ಕಾಕೋಟುಪರಂಬು ದೇವಾಲಯದ ಬಳಿ ಒಂದು ಟ್ರಾನ್ಸ್ಫಾರಂ ಮಂಜೂರಾಗಿದ್ದರೂ, ಇಲಾಖೆಗೆ ಈವರೆಗೆ ಅದನ್ನು ಅಳವಡಿಸಲು ಸಾಧ್ಯವಾಗಿಲ್ಲ. ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಟ್ರಾನ್ಸ್ಫಾರಂ ಅಳವಡಿಸಿದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ವಿಳಂಬವಾಗುತ್ತದೆ ನೀವುಗಳೇ ಸೇರಿ ಪ್ರತಿ ಮನೆಯಿಂದ 500 ರೂಗಳನ್ನು ಸಂಗ್ರಹಿಸಿ ಗುತ್ತಿಗೆದಾರರಿಗೆ ನೀಡಿ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಹೇಳುತ್ತಾರೆ ಎಂದು ದೂರಿದ್ದಾರೆ. ಜಿ.ಪಂ. ವತಿಯಿಂದ ಬೇತರಿ ಗ್ರಾಮದ ಅಂಗನವಾಡಿ ಬಳಿ ಹಾಗೂ ಕೆ. ಗೌತಮ್ ಮನೆ ಬಳಿಯ ಮುಖ್ಯ ರಸ್ತೆಯಲ್ಲಿ ಬೋರ್ವೆಲ್ ತೆಗೆಯಲಾಗಿದ್ದು ಈವರೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಕುಡಿಯುವ ನೀರಿಗೆ ತಕ್ಷಣವೆ ವಿದ್ಯುತ್ ಸಂಪರ್ಕ ನೀಡಬೇಕು ಎಂಬ ಕಾನೂನಿದ್ದರೂ ಇಲಾಖೆ ಕಾನೂನುನನ್ನು ಗಾಳಿಗೆ ತೂರಿ ತಮಗಿಷ್ಟ ಬಂದ ರೀತಿಯಲ್ಲಿ ವರ್ತಿಸುತ್ತಿದೆ. ವೀರಾಜಪೇಟೆಯಿಂದ ಮೂರ್ನಾಡುವಿಗೆ ಹಾದು ಹೋಗಿರುವ 11 ಕೆ.ವಿ. ವಿದ್ಯುತ್ ಕಂಬ ಬೇತರಿ ಜಂಕ್ಷನ್ ಬಳಿ ಅಂಗನವಾಡಿಗೆ ವಾಲಿಕೊಂಡ ಪರಿಣಾಮ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ವಾಲಿರುವ ಕಬ್ಬಿಣದ ಕಂಬಕ್ಕೆ ಕಬ್ಬಿಣದ ಮತ್ತೊಂದು ಕಂಬವನ್ನು ತಾಗಿಸಿ ಇಡಲಾಗಿದೆ. ಮಳೆಗಾಲದಲ್ಲಿ ಆ ಕಂಬದಲ್ಲಿ ವಿದ್ಯುತ್ ಹರಿದು ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಿದೆ. ಬೇಸಿಗೆ ಕಾಲದಲ್ಲಿ ಸುಮ್ಮನಿದ್ದು ಮಳೆ ಪ್ರಾರಂಭವಾಗುವಾಗ ಜಂಗಲ್ ಕಟ್ಟಿಂಗ್ ಎಂದು ವಿದ್ಯುತ್ ಅಡಚಣೆ ಉಂಟುಮಾಡುತ್ತಾರೆ. ಬಹುತೇಕ ಲೈನ್ಗಳು ತೋಟ ಮಧ್ಯದಲ್ಲಿ ಹಾದು ಹೋಗಿದ್ದು ಜಂಗಲ್ ಕಟ್ಟಿಂಗ್ ಮಾಡಲು ತೋಟದ ಆಳುಗಳನ್ನು ಬಿಟ್ಟು ಕೊಟ್ಟು ಲೈನ್ ಕ್ಲಿಯರ್ ಮಾಡುತ್ತಾರೆ. ನಂತರ ಇಲಾಖೆಯ ಅಧಿಕಾರಿಗಳು ಇಂತಿಷ್ಟು ಜನರ ಕೆಲಸ ಆಗಿದೆ ಎಂದು ಬಿಲ್ ಡ್ರಾ ಮಾಡಿಕೊಂಡು ಇಲಾಖೆಯನ್ನು ವಂಚಿಸುತ್ತಾರೆ. ಈ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡುವದಿಲ್ಲ. ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವದಿಲ್ಲ ಎಂದು ದೂರಿದ್ದಾರೆ.
ಟ್ರಾನ್ಸ್ಫಾರಂಗಳ ಸಂಪರ್ಕ ಅದಲು ಬದಲು ಆಗುವ ಸಾಧ್ಯತೆ ಇಲ್ಲ. ಹ್ಯೆ ವೊಲ್ಟೇಜ್ ಬಂದರೆ ಮೋಟಾರ್ಗಳು ಹಿಮ್ಮುಖವಾಗಿ ಚಲಿಸುತ್ತದೆ. ಅದನ್ನು ಸರಿಪಡಿಸ ಲಾಗುವದು. ಆದರೆ ಟ್ರಾನ್ಸ್ಫಾರಂಗಳು ಸುಟ್ಟು ಹೋಗುವ ಸಾಧ್ಯತೆ ಕಡಿಮೆ. ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಜಿಲ್ಲೆಯಲ್ಲಿ ಆಳುಗಳ ಕೂಲಿ ಹಣ ಜಾಸ್ತಿ ಇರುವದರಿಂದ ನಮ್ಮ ಎಸ್.ಆರ್. ರೇಟ್ನಲ್ಲಿ ಕೆಲಸ ನಿರ್ವಹಿಸಲು ಯಾವದೇ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಕೆಲವೊಂದು ಕಡೆಗಳಲ್ಲಿ ಭೀಮ್ ದಯಾಳ್ ಸ್ಕೀಂನಲ್ಲಿ ಸಂಪರ್ಕ ನೀಡಲಾಗಿದೆ ಎಂದು ಚೆಸ್ಕಾಂನ ಸಹಾಯಕ ಅಭಿಯಂತರ ಕೆ.ಆರ್. ಸುರೇಶ್ ಪ್ರತಿಕ್ರಿಯಿಸಿದರು.