ಕೂಡಿಗೆ, ಜೂ. 14: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರದಲ್ಲಿ 6 ವರ್ಷಗಳ ಹಿಂದೆ ಸ್ಥಾಪನೆಯಾದ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರವು ಕೊಡಗು, ದಕ್ಷಿಣ ಕನ್ನಡ, ಮೈಸೂರು, ಹಾಸನ ಹಾಗೂ ಇನ್ನಿತರ ಜಿಲ್ಲೆಗಳ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ, ನೆರೆಯ ರಾಜ್ಯದ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣದ ಸೌಲಭ್ಯವನ್ನು ಯಶಸ್ವಿಯಾಗಿ ನೀಡುತ್ತಾ ಬಂದಿದೆ.

ಮಂಗಳೂರು ವಿಶ್ವ ವಿದ್ಯಾ ನಿಲಯದ ಘೋಷಣೆ ಯೊಂದಿಗೆ ಈ ಸ್ನಾತಕೋತ್ತರ ಕೇಂದ್ರವು ಜಿಲ್ಲೆಯ ಗಡಿಭಾಗದ ಹಾಸನ, ಮೈಸೂರು ಜಿಲ್ಲೆಗಳ ವಿದ್ಯಾರ್ಥಿಗಳ ಸ್ನಾತಕೋತ್ತರ ವಿದ್ಯಾರ್ಜನೆಗೆ ಹೆಚ್ಚು ಪ್ರಯೋಜ ನಕಾರಿಯಾಗಿದೆ. 2014ರಲ್ಲಿ ಪ್ರಾರಂಭಗೊಂಡ ಈ ಸ್ನಾತಕೋತ್ತರ ಕೇಂದ್ರವು 80 ವಿದ್ಯಾರ್ಥಿಗಳ ಕಲಿಕೆಯ ಮೂಲಕ ಪ್ರಾರಂಭ ಗೊಂಡು ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. 2012ರಲ್ಲಿ ಅಂದಿನ ಮುಖ್ಯ ಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿ, ರಾಜ್ಯ ಸರ್ಕಾರದಿಂದ ರೂ. 5 ಕೋಟಿ ನೀಡುವದಾಗಿ ಭರವಸೆ ನೀಡಿ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ರಾಜ್ಯ ಸರ್ಕಾರದಿಂದ ರೂ. 5 ಕೋಟಿಯ ಬದಲು ರೂ. 1 ಕೋಟಿ ಬಿಡುಗಡೆಗೊಂಡಿದ್ದು, ಇನ್ನೂ ರೂ. 4 ಕೋಟಿ ಬಿಡುಗಡೆ ಯಾಗಬೇಕಿದೆ. ಮಂಗಳೂರು ವಿಶ್ವ ವಿದ್ಯಾನಿಲಯದ ಯೋಜನೆಯಂತೆ ಈ ಸ್ನಾತಕೋತ್ತರ ಕೇಂದ್ರದ ಕಾಮಗಾರಿಯು ಪ್ರಾರಂಭಗೊಂಡು ಉತ್ತಮ ಕಟ್ಟಡವು ನಿರ್ಮಾಣ ಗೊಳ್ಳುತ್ತ ತಡೆಗೋಡೆಯೊಂದಿಗೆ ಮೊದಲ ಹಂತದ ಸ್ನಾತಕೋತ್ತರ ಕೇಂದ್ರ ಉದ್ಘಾಟನೆಯನ್ನು 2014ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೆರವೇರಿಸಿದ್ದರು.

ಈ ಕೇಂದ್ರವು ಸಮಾಜಕ್ಕೆ ನೂರಾರು ಪ್ರಜ್ಞಾವಂತ ನಾಗರಿಕರನ್ನು ನೀಡುವಲ್ಲಿ ದಾಪುಗಾಲಿಡುತ್ತಿದೆ. ಈ ಕೇಂದ್ರದಲ್ಲಿ 2014 ಶೈಕ್ಷಣಿಕ ವರ್ಷದಲ್ಲಿ 10 ವಿಭಾಗಗಳು ಇದ್ದು, ಈಗಾಗಲೇ ಜೀವರಸಾಯನ ಶಾಸ್ತ್ರ (ಎಂ.ಎಸ್ಸಿ) ಸೂಕ್ಷ್ಮಾಣು ಜೀವಶಾಸ್ತ್ರ (ಎಂ.ಎಸ್ಸಿ), ವಾಣಿಜ್ಯ (ಎಂ.ಕಾಂ), ಕನ್ನಡ (ಎಂ.ಎ) ಇತಿಹಾಸ (ಎಂ.ಎ) ರಾಜ್ಯಶಾಸ್ತ್ರ (ಎಂ.ಎ) ಸಮಾಜ ಕಾರ್ಯ (ಎಂ.ಎಸ್.ಡಬ್ಲ್ಯೂ), ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್, ಸ್ನಾತಕೋತ್ತರ ಪದವಿ ತರಗತಿಗಳನ್ನು ಹೊಂದಿದೆ. ಈ 2019ರ ಶೈಕ್ಷಣಿಕ ವರ್ಷದಲ್ಲಿ ಎಂ.ಎಸ್ಸಿ ಪತ್ರಿಕೋದ್ಯಮ, ಎಂ.ಎಸ್ಸಿ ಪರಿಸರ ಸಂಬಂಧಪಟ್ಟ ವಿಭಾಗಗಳನ್ನು ಪ್ರಾರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯದಿಂದ ಅನುಮತಿ ದೊರಕಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಪದವಿ ತರಗತಿಗಳು ಆರಂಭಗೊಳ್ಳಲಿವೆ ಎಂದು ಪ್ರಭಾರ ನಿರ್ದೇಶಕಿ ಮಂಜುಳಾ ಶಾಂತರಾಮ್ ತಿಳಿಸಿದ್ದಾರೆ. 80 ವಿದ್ಯಾರ್ಥಿಗಳಿಂದ ಪ್ರಾರಂಭ ವಾದ ಈ ಸ್ನಾತಕೋತ್ತರ ಕೇಂದ್ರದಲ್ಲಿ ಇದೀಗ 600 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸ್ನಾತಕ್ಕೋತ್ತರ ಕೇಂದ್ರಕ್ಕೆ ಸೇರಿದ ಎರಡು ವಿದ್ಯಾರ್ಥಿ ನಿಲಯಗಳಲ್ಲಿ ಒಂದು ಪುರುಷರಿಗೆ ಮತ್ತೊಂದು ಮಹಿಳಾ ವಿದ್ಯಾರ್ಥಿಗಳಿಗೆ ಬಳಸ ಲಾಗುತ್ತಿತ್ತು. ಇದೀಗ 350ಕ್ಕೂ ಹೆಚ್ಚು ವಿದ್ಯಾರ್ಥಿನಿಯರೇ ಇರುವದರಿಂದ ಈ ಎರಡು ವಿದ್ಯಾರ್ಥಿ ನಿಲಯಗಳು ಮಹಿಳಾ ವಿದ್ಯಾರ್ಥಿ ಗಳಿಗೆ ಬಳಕೆಯಾಗುತ್ತಿದೆ. ಕೂಡಿಗೆಯ ಡಯಟ್ ಕೇಂದ್ರದಲ್ಲಿದ್ದ ವಿದ್ಯಾರ್ಥಿ ನಿಲಯವನ್ನು 100 ಪುರುಷ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. ಇನ್ನುಳಿದ ಸ್ಥಳೀಯ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ಬಂದು ಶಿಕ್ಷಣ ಪಡೆಯುತ್ತಿದ್ದಾರೆ.

ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿ ಪ್ರೊ. ಸುಬ್ರಮಣ್ಯ ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಕೇಂದ್ರವು ಉತ್ತಮ ಮಟ್ಟದಲ್ಲಿ ಸಾಗುತ್ತಿದ್ದು, ಅನುಭವಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳ ಶ್ರಮದೊಂದಿಗೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಪ್ರಭಾರ ನಿರ್ದೇಶಕಿ ಮಂಜುಳಾ ಶಾಂತರಾಮ್ ಮಾಹಿತಿ ನೀಡಿ, ವಿಶ್ವವಿದ್ಯಾನಿಲಯ ಧನ ಸಹಾಯ ನಿಯಮಾವಳಿಯನುಸಾರ ಈ ಕೇಂದ್ರದಲ್ಲಿ ರ್ಯಾಗಿಂಗ್ ವಿರೋಧಿ ಕೋಶ, ಮಹಿಳಾ ಸಂರಕ್ಷಣಾ ಕೋಶ, ಸ್ಪರ್ಷ್ ಕ್ಯಾಂಟೀನ್ ಕಮಿಟಿ, ಮಾನವ ಹಕ್ಕುಗಳ ಕೋಶ, ವಿದ್ಯಾರ್ಥಿ ಕಲ್ಯಾಣ ಕೋಶ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಕೋಶ, ಗ್ರಾಮಗಳ ದತ್ತು ಪಡೆದು ಅಭಿವೃದ್ಧಿ ಯೋಜನೆ ಹಾಗೂ ಗ್ರಾಮಗಳ ಜ್ವಲಂತ ಸಮಸ್ಯೆಗಳನ್ನು ಕ್ರೋಢೀಕರಿಸಿ ಯೋಜನೆ ರೂಪಿಸಿ ಸರ್ಕಾರದ ಗಮನ ಹರಿಯುವಂತೆ ಮಾಡುವದು, ಸ್ವಚ್ಛತಾ ಅಭಿಯಾನ ಸಮಿತಿ ಹೀಗೆ 10 ಸಮಿತಿಗಳನ್ನು ರಚಿಸಿ, ಜಾಗೃತಿ ಶಿಬಿರಗಳ್ನು ಏರ್ಪಡಿಸುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಕಾರ್ಯೋ ನ್ಮುಖರಾಗಿದ್ದೇವೆ.

ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿ, ವಿದ್ಯಾರ್ಥಿನಿ ಯರಿಗೆ ಆಧುನಿಕ ಸುಸಜ್ಜಿತ ಪ್ರಯೋ ಗಾಲಯ, ಕ್ಯಾಂಟೀನ್ ಹಾಗೂ ವಾಹನ ಸೌಲಭ್ಯ ಕಲ್ಪಿಸಿಕೊಡ ಲಾಗುತ್ತಿದೆ. ಹಾಗೆಯೇ ಸುರಕ್ಷತೆಯ ದೃಷ್ಟಿಯಿಂದ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳ ಉತ್ತಮ ಶೈಕ್ಷಣಿಕ ಭವಿಷ್ಯಕ್ಕಾಗಿ ನಮ್ಮ ಸ್ನಾತ ಕೋತ್ತರ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ