ಆಲೂರು-ಸಿದ್ದಾಪುರ, ಜೂ. 14: ಭೂ ಸಾಗುವಳಿದಾರರು ಹೋರಾಟದ ಶ್ರಮದಿಂದ ತಮ್ಮ ಹಕ್ಕನ್ನು ಪ್ರತಿಪಾದಿಸುವ ಮೂಲಕ ಉಳುವ ಭೂಮಿಗೆ ಮಾಲೀಕರಾಗಿ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ರಾಜ್ಯ ಸಂಚಾಲಕ ರಾಜಶೇಖರ್ ನಾಯ್ಡು ಅಭಿಪ್ರಾಯಪಟ್ಟರು.

ಇಲ್ಲಿಯ ಸಾರ್ವಜನಿಕ ಸಮುದಾಯ ಭವನದಲ್ಲಿ ವೇದಿಕೆಯ ಜಿಲ್ಲಾ ಘಟಕ ಹಾಗೂ ಗ್ರಾ.ಪಂ. ವತಿಯಿಂದ ಭೂ ಸಾಗುವಳಿದಾರರಿಗೆ ನಾಯಕತ್ವದ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ರಾಜ್ಯ ಮಹಿಳಾ ಸಂಚಾಲಕಿ ಚಿತ್ರಾವತಿ ಮಾತನಾಡಿ, ಹಲವಾರು ವರ್ಷಗಳಿಂದ ಭೂಮಿಯಲ್ಲಿ ಉಳಿಮೆ ಮಾಡಿ ಜೀವನ ನಡೆಸುತ್ತಿದ್ದರೂ ಸರಕಾರ ಭೂಮಿಗೆ ಹಕ್ಕುಪತ್ರ ಕೊಡುವದಿಲ್ಲ. ಸಾಲ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸಿ ಹೋರಾಟದ ಮೂಲಕ ಭೂ ಹಕ್ಕುದಾರಾಗಬೇಕಾಗಿದೆ ಎಂದರು. ಸಂಘಟನೆಯಲ್ಲಿ ಎಲ್ಲಾರೂ ಒಂದಾಗಿ ಒಗ್ಗಟ್ಟು ಪ್ರದರ್ಶಿಸಿದರೆ ಖಂಡಿತವಾಗಲೂ ನ್ಯಾಯ ಸಿಗುತ್ತದೆ. ಇದರಿಂದ ಸಾಗುವಳಿದಾರರು ಭೂ ಮಾಲೀಕರಾಗಿ ಸರಕಾರದ ಎಲ್ಲಾ ಸೌಲಭ್ಯ, ಹಕ್ಕನ್ನು ಪಡೆದುಕೊಳ್ಳಬಹುದೆಂದರು.

ಕಾರ್ಯಕ್ರಮದಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್, ಜಿಲ್ಲಾ ಸಂಚಾಲಕ ಸುನಂದ್‍ಕುಮಾರ್, ಗ್ರಾ.ಪಂ. ಪಿಡಿಒ ಪೂರ್ಣಿಮಾ, ರಾಜ್ಯ ಮತ್ತು ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.