ಸೋಮವಾರಪೇಟೆ, ಜೂ. 14: ತಾಲೂಕಿನ ಸಿದ್ಧಲಿಂಗಪುರ-ಅರಶಿನಗುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಮತ್ತು ನವನಾಗ ಸನ್ನಿಧಿಯಲ್ಲಿ ತಾ. 19 ರಂದು ದೇವಾಲಯದ ವಾರ್ಷಿಕೋತ್ಸವ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಗುರುಗಳಾದ ಶ್ರೀ ರಾಜೇಶ್‍ನಾಥ್ ಗುರೂಜಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಪ್ರಾರ್ಥನಾ ಪೂಜೆಯೊಂದಿಗೆ ವಾರ್ಷಿಕ ಪೂಜೋತ್ಸವ ಪ್ರಾರಂಭವಾಗಲಿದ್ದು, ಗಣಪತಿ ಹೋಮ, ವಿಶೇಷ ಅಭಿಷೇಕ ಸೇವೆ, ಆಶ್ಲೇಷ ಬಲಿ, ಹೋಮ ಪೂಜೆ, ನಾಗದೇವರಿಗೆ ಅಭಿಷೇಕ, ತಂಬಿಲ ಸೇವೆ, ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.