ಮಡಿಕೇರಿ, ಜೂ. 14: ಅಬ್ಬಬ್ಬಾ.., 2018ರ ಮುಂಗಾರಿನ ಆರಂಭವೇ ಭಯಾನಕತೆಯಿಂದ ಕೂಡಿದ್ದು, ಕೊಡಗಿನ ಜನತೆಯ ಸ್ಮøತಿಪಟಲದಿಂದ ಇನ್ನೂ ಮರೆಯಾಗಿಲ್ಲ. ಜಿಲ್ಲೆಯಲ್ಲಿ ಬಹುತೇಕ ವಾಡಿಕೆಯಂತೆ ಜೂನ್ ತಿಂಗಳಿನಿಂದ ಮುಂಗಾರು ಮಳೆ ಆರಂಭಗೊಳ್ಳುತ್ತದೆ. ಜೂನ್‍ನಿಂದ ಮೆಲ್ಲ ಮೆಲ್ಲಗೆ ವರ್ಷಧಾರೆ ಸುರಿಯಲಾರಂಭಿಸಿ ನಂತರ ಬಿರುಸುಗೊಳ್ಳುತ್ತಾ ಹೋಗುವದು ಸಹಜ. ಆದರೆ, ಕಳೆದ ವರ್ಷ ಕೊಡಗಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಆರಂಭದ ದಿನಗಳಿಂದಲೇ ಮುಂಗಾರು ಜಿಲ್ಲೆಯಲ್ಲಿ ಆರ್ಭಟಿಸಲಾರಂಭಿಸಿತ್ತು. ಜೂನ್ ಎರಡನೇ ವಾರದಲ್ಲಿ ಮುಂಗಾರು ಮಳೆ ಕಾಣಿಸಿಕೊಂಡರೂ ಆ ವರ್ಷದ ಏಪ್ರಿಲ್ - ಮೇ ತಿಂಗಳಿನಲ್ಲೂ ಭಾರೀ ವರ್ಷಧಾರೆಯಾಗಿತ್ತು. ಜೂನ್ 6-7 ರ ದಿನಾಂಕದಿಂದ ಶುರುವಿಟ್ಟುಕೊಂಡ ಮುಂಗಾರು ಮಳೆಯ ಅಬ್ಬರದಿಂದ ಇಡೀ ಜಿಲ್ಲೆ ಆರಂಭಿಕ ದಿನಗಳಿಂದಲೇ ತತ್ತರಿಸಲಾರಂಭಿಸಿದ್ದು, ಜನತೆಯ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.

ಜೂನ್ 9ರ ದಿನಾಂಕದಂದೇ ಜಿಲ್ಲೆಯಾದ್ಯಂತ ಶಾಲಾ - ಕಾಲೇಜುಗಳಿಗೆ ರಜೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈ ವೇಳೆಗಾಗಲೇ ಜನವರಿಯಿಂದ ಜಿಲ್ಲೆಯಲ್ಲಿ ಸುಮಾರು 20.64 ಇಂಚಿನಷ್ಟು ಮಳೆಯಾಗಿದ್ದರೆ, ಮಡಿಕೇರಿ ತಾಲೂಕಿನಲ್ಲಿ 30.50 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 15.22 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 16.19 ಇಂಚು ಸರಾಸರಿ ಮಳೆ ಸುರಿದಿತ್ತು.

2018ರ ಜೂನ್ 9 ರ ದಿನ ಮತ್ತೊಂದು ಧಾರುಣತೆಗೂ ಕಾರಣವಾಗಿತ್ತು. ಸಿದ್ದಾಪುರದಲ್ಲಿ ಧಾರಾಕಾರ ಮಳೆ - ಗಾಳಿಯಿಂದಾಗಿ ತೋಟಕ್ಕೆ ತೆರಳಿದ್ದ ಬೆಳೆಗಾರ ಅಹಮದ್ ಹಾಜಿ ಅವರ ಮೇಲೆ ಮರ ರೆಂಬೆಯೊಂದು ಮುರಿದು ಬಿದ್ದು ಅವರು ಸಾವನ್ನಪ್ಪಿದ ಕಹಿಘಟನೆ ಇದಾಗಿತ್ತು.

ಜೂನ್ 9-10-11 -12ರ ದಿನಾಂಕಗಳಲ್ಲೂ ಜಿಲ್ಲೆಯಲ್ಲಿ ಮಳೆಯ ಪ್ರತಾಪ ವಿಪರೀತವಾಗಿತ್ತು. ಬಹುತೇಕ ಇಡೀ ಜಿಲ್ಲೆಯಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡು ಗಾಡಾಂಧಕಾರ ಆವರಿಸಿತ್ತು. ಮೂರು ತಾಲೂಕಿನ ಹಲವೆಡೆಗಳಲ್ಲಿ ಅದೆಷ್ಟೋ ಮನೆಗಳು ಜಖಂಗೊಂಡಿದ್ದವಲ್ಲದೆ ನದಿ - ತೋಡು - ತೊರೆಗಳಲ್ಲಿ ನೀರಿನ ಹರಿವು ಅಧಿಕಗೊಂಡು ಸಂಪರ್ಕವೂ ಕಡಿತಗೊಂಡಿತ್ತಲ್ಲದೆ, ಶಾಲಾ - ಕಾಲೇಜುಗಳಿಗೆ ರಜೆ ನೀಡಲೇಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ಈ ಸಮಯಕ್ಕೆ ಸೆಸ್ಕ್‍ಗೆ ರೂ. 52.17 ಲಕ್ಷದಷ್ಟು ನಷ್ಟ ಸಂಭವಿಸಿದ್ದು, ಜಿಲ್ಲೆಯಲ್ಲಿ ಎದುರಾಗಿದ್ದ ಮುಂಗಾರಿನ ಆರಂಭಿಕ ಅಬ್ಬರಕ್ಕೆ ಸಾಕ್ಷಿಯಾಗಿದೆ.

ಜೂನ್ 13ರ ದಿನವಂತೂ ಇಡೀ ದಕ್ಷಿಣ ಕೊಡಗು ಅಕ್ಷರಶಃ ಜರ್ಜರಿತಗೊಂಡಿದ್ದು, ಮರೆಯಲಾಗದ ಘಟನೆ ಈ ದಿನದಂದು ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ 18 ಇಂಚಿನಷ್ಟು ಭಾರೀ ಪ್ರಮಾಣದ ಮಳೆ ಸುರಿದಿರುವದು ಕೂಡ ಒಂದು ಇತಿಹಾಸವಾಗಿದೆ. ಇದರೊಂದಿಗೆ ವೀರಾಜಪೇಟೆಯಿಂದ ಮಾಕುಟ್ಟ ಮಾರ್ಗವಾಗಿ ಕೇರಳವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿಯಂತೂ ಇನ್ನಷ್ಟು ಶೋಚನೀಯವಾಗಿ ಅಂತರರಾಜ್ಯ ಸಂಪರ್ಕವೇ ಕಡಿದುಹೋಗಿತ್ತು.

ಅಸಂಖ್ಯ ಮರಗಳು ಧರೆಗುರುಳಿದರೆ, ಬರೆಗಳು ಕುಸಿತಗೊಂಡಿದ್ದವು. ಎಲ್ಲೆಲ್ಲೂ ಜಲಾವೃತವಾದ ಭೀಕರ ಸನ್ನಿವೇಶ ಎದುರಾಗಿ ಜನತೆ ಕಂಗೆಟ್ಟು ಹೋಗಿದ್ದರು. ಈ ವ್ಯಾಪ್ತಿಯಲ್ಲಿ ಮನೆ - ಅಂಗಡಿಗಳಿಗೆ ನೀರು ನುಗ್ಗಿದ್ದು, ಒಂದೆಡೆಯಾದರೆ ಜಿಲ್ಲೆಯ ಇತರ ಭಾಗಗಳಲ್ಲೂ ವ್ಯಾಪಕ ನಷ್ಟ ಸಂಭವಿಸಿತ್ತು. ಹಲವಾರು ರಸ್ತೆ, ಸೇತುವೆಗಳು ಮುಳುಗಡೆಗೊಂಡಿದ್ದವು. ಈ ಪರಿಸ್ಥಿತಿಯ ನಡುವೆ ಕೇರಳ ಗಡಿಭಾಗದಲ್ಲಿ ಕಾರ್ಮಿಕರೋರ್ವರು ಜೀವ ಕಳೆದುಕೊಂಡಿದ್ದರು.

ಭಾಗಮಂಡಲ - ನಾಪೋಕ್ಲು ರಸ್ತೆ ಮುಳುಗಡೆಯಾಗಿ ದೋಣಿ (ರ್ಯಾಫ್ಟಿಂಗ್ ಬೋಟ್) ವ್ಯವಸ್ಥೆ ಕಲ್ಪಿಸುವಂತಾಗಿತ್ತು. ಕೆಲವೆಡೆಗಳಲ್ಲಿ ಆಶ್ರಯ ಕೇಂದ್ರಗಳನ್ನೂ ಪ್ರಾರಂಭಿಸುವಂತಾಗಿದ್ದು, 2018ರ ಜೂನ್ 14ರ ವೇಳೆಗಾಗಲೇ ಎದುರಾಗಿದ್ದ ಧಾರುಣ ಸನ್ನಿವೇಶವಾಗಿತ್ತು. ಜೂನ್ 14-15ರ ದಿನ ಮಳೆ ಇಳಿಮುಖಗೊಂಡರೂ ಪ್ರವಾಹ ಪರಿಸ್ಥಿತಿ ಮುಂದುವರಿದಿತ್ತು. ಮಾಕುಟ್ಟ ರಸ್ತೆ ಮೊದಲೇ ಬಂದ್ ಆಗಿದ್ದರೆ ಹುಣಸೂರು - ತಿತಿಮತಿ ರಸ್ತೆಯಲ್ಲಿ ಸೇತುವೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕರ್ನಾಟಕ - ಕೇರಳ ಗಡಿ ಬಂದ್ ಆಗಿ ಭಯಾನಕ ರೀತಿಯಲ್ಲಿ ಮಾರ್ಪಟ್ಟಿದ್ದ ಮಾಕುಟ್ಟ ವಿಭಾಗದಲ್ಲಿ ಎನ್‍ಡಿಆರ್‍ಎಫ್‍ನ ತಂಡದಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸುವಂತಾಗಿ ಜಿಲ್ಲೆ, ರಾಜ್ಯದ ಜನಪ್ರತಿನಿಧಿಗಳು ಕೇರಳ ರಾಜ್ಯದ ಜನಪ್ರತಿನಿಧಿಗಳೂ ಇತ್ತ ದೌಡಾಯಿಸುವಂತಾಗಿತ್ತು. 2017ರ ವರ್ಷಕ್ಕೆ ಹೋಲಿಸಿದರೆ, ಕೊಡಗಿನಲ್ಲಿ ಸರಾಸರಿ 24.32 ಇಂಚು ಅಧಿಕ ಮಳೆ ಸುರಿದು ನಂತರ ಕೆಲವು ದಿನಗಳು ಮಳೆ ತುಸು ಬಿಡುವು ನೀಡಿದ್ದು, ಕಳೆದ ವರ್ಷದ ಸನ್ನಿವೇಶ ಈ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 48.26 ಇಂಚು, ವೀರಾಜಪೇಟೆ 34.76 ಹಾಗೂ ಸೋಮವಾರಪೇಟೆಯಲ್ಲಿ 29.12 ಇಂಚು ಮಳೆ ಸುರಿದಿದ್ದು, ಕಳೆದ ಸಾಲಿನ ಮೆಲುಕಾಗಿದೆ.

ಈ ಬಾರಿ ಸಹಜತೆಯಾಗಲಿ

ಪ್ರಸ್ತುತ 2019ರ ವರ್ಷದ ಜೂನ್ 13ರ ದಿನ ಮುಗಿದಿದೆ. ಕಳೆದ ವರ್ಷದ ಗಂಭೀರತೆಯನ್ನು ಊಹಿಸಿದಲ್ಲಿ ಈ ಬಾರಿ ಅಂತಹ ಭಯಾನಕತೆಯ ವಾತಾವರಣ ಸೃಷ್ಟಿಯಾಗದಿರುವದು ಜನತೆಗೆ ತುಸು ನೆಮ್ಮದಿ ನೀಡಿದೆ. ಆದರೂ ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಇಲ್ಲಿ ಆಯಾ ಸಂದರ್ಭದಲ್ಲಿ ಯಾವ ಯಾವ ಕೆಲಸಗಳು ಆಗಬೇಕು ಅದು ವಾಡಿಕೆಯಂತೆ ಮುಂದುವರಿಯಲೇಬೇಕಿದೆ. ಈ ಅವಧಿಯಲ್ಲಿ ಕೃಷಿ ಕೆಲಸ ಕಾರ್ಯಗಳು ಪ್ರಾರಂಭಗೊಳ್ಳುವದು ಕೊಡಗಿನ ಸಂಪ್ರದಾಯವೂ ಹೌದು. ಪರಿಸ್ಥಿತಿಯೂ ಹೌದು ಕಳೆದ ವರ್ಷದ ಪರಿಸ್ಥಿತಿಯ ಗಂಭೀರತೆಯಿಂದಾಗಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನತೆಗೆ ಪೂರ್ವ ಮಾಹಿತಿಯನ್ನೂ ನೀಡುತ್ತಿದೆ. ಆದರೂ ನಿಸರ್ಗದ ಎದುರು ಯಾರೂ ಆಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಸಹಜತೆಯ ವಾತಾವರಣ ಈ ಹಿಂದಿನ ವರ್ಷಗಳಂತೆ ಮುಂದುವರಿದು ಎಲ್ಲವೂ ಸುಗಮವಾಗಲಿ ಎಂಬದು ಸದಾಶಯ. - ಶಶಿ ಸೋಮಯ್ಯ