ಸುಂಟಿಕೊಪ್ಪ, ಜೂ. 14: ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ 36 ವರ್ಷಗಳಿಂದ ಡಿ.ದರ್ಜೆ ನೌಕರನಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹೆಚ್.ಬಿ. ಅಪ್ಪು ಅವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.

ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯವರು ಅಪ್ಪು ಅವರನ್ನು ಶಾಲು, ಫಲತಾಂಬೂಲ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯ ಸಿ.ಜಿ. ಮಂದಪ್ಪ, ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ಸದಸ್ಯರುಗಳಾದ ಪಿ.ಎನ್. ಮೋಹನ್, ಸಿ.ಪಿ.ಮುದ್ದಪ್ಪ, ಕೆ.ಎಸ್. ಮಂಜುನಾಥ್, ಸೀತಾ ಚಿಟ್ಟಿಯಪ್ಪ, ಎಂ.ಸಿ. ಬೋಜಮ್ಮ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎನ್.ಎ. ರೇವತಿ ಇತರರು ಇದ್ದರು.