ನೂತನ ಎಡಿಸಿ ಆಗಿ ಸ್ನೇಹಾ ಮಡಿಕೇರಿ, ಜೂ. 14: ಕೊಡಗು ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳ ಹುದ್ದೆಯಲ್ಲಿ ಮಹಿಳಾ ಆಡಳಿತ ಮುಂದುವರಿಯಲಿದೆ. ಪ್ರಸ್ತುತ ಜಿಲ್ಲಾಧಿಕಾರಿಯಾಗಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯಾಗಿರುವದು ಡಾ. ಸುಮನ್ ಡಿ.ಪಿ. ಇವರೊಂದಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವದು ಕೂಡ ಲಕ್ಷ್ಮಿಪ್ರಿಯ ಅವರು ಇದೀಗ ಇವರ ಸಾಲಿಗೆ ಮತ್ತೊಬ್ಬ ಹಿರಿಯ ಮಹಿಳಾ ಅಧಿಕಾರಿ ಜಿಲ್ಲೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ.ಜಿಲ್ಲೆಯಲ್ಲಿ ಈ ತನಕ ಅಪರ ಜಿಲ್ಲಾಧಿಕಾರಿಯಾಗಿದ್ದು, ಇತ್ತೀಚೆಗೆ ವರ್ಗಾವಣೆಗೊಂಡಿರುವ ಶಿವರಾಜು ಅವರ ಸ್ಥಾನಕ್ಕೆ ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿರುವ ಡಾ. ಸಿ.ವಿ. ಸ್ನೇಹಾ ಅವರನ್ನು ನೇಮಕಮಾಡಿ ಸರಕಾರ ಆದೇಶ ಹೊರಡಿಸಿದೆ. ಸ್ನೇಹಾ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿದ್ದು, ಇದೀಗ ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ನಿಯೋಜಿತರಾಗಿದ್ದು, ಇನ್ನಷ್ಟೆ ಅಧಿಕಾರ ವಹಿಸಿಕೊಳ್ಳಬೇಕಿದೆ.