ಸೋಮವಾರಪೇಟೆ, ಜೂ.13: ಸೋಮವಾರಪೇಟೆಯಲ್ಲಿ ಕಳೆದ 1998ರಲ್ಲಿ ಸ್ಥಾಪನೆಯಾದ ರೋಟರಿ ಸಂಸ್ಥೆ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಕೈಕೊಂಡಿದ್ದು, ಪ್ರಸ್ತುತ 1 ಕೋಟಿ ವೆಚ್ಚದಲ್ಲಿ ಸ್ವಂತ ಭವನ ಹೊಂದುವತ್ತ ದಾಪುಗಾಲಿಡುತ್ತಿದೆ.

ಪಟ್ಟಣದ ಕರ್ಕಳ್ಳಿ ರಸ್ತೆಯಲ್ಲಿರುವ ರೋಟರಿ ಸಂಸ್ಥೆಗೆ ಸೇರಿದ 20 ಸೆಂಟ್ಸ್ ನಿವೇಶನದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಹಿರಿಯ ರೊಟೇರಿಯನ್ ಬಿ.ಎಸ್. ಸದಾನಂದ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ರೂ. 1 ಕೋಟಿ ವೆಚ್ಚದಲ್ಲಿ ರೋಟರಿ ಭವನ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿದ್ದು, ಅದರಂತೆ ಈಗಾಗಲೇ ರೂ. 45 ಲಕ್ಷ ವೆಚ್ಚದಲ್ಲಿ ನೆಲ ಅಂತಸ್ತು ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ನೆಲ ಅಂತಸ್ತಿನಲ್ಲಿ ಸಭಾಂಗಣ, ಶೌಚಾಲಯ, ಕಚೇರಿ ಕೊಠಡಿಗಳು ನಿರ್ಮಾಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.

ಮುಂದಿನ ದಿನಗಳಲ್ಲಿ 1ನೇ ಅಂತಸ್ತಿನಲ್ಲಿ ಸಭಾಂಗಣ, 2ನೇ ಅಂತಸ್ತಿನಲ್ಲಿ ವೃತ್ತಿಪರ ತರಬೇತಿ, ಸ್ವ ಉದ್ಯೋಗ ಕೈಗೊಳ್ಳುವವರಿಗೆ ತರಬೇತಿ ಕೇಂದ್ರ ಸ್ಥಾಪನೆ ಮಾಡುವ ಚಿಂತನೆಯನ್ನು ರೋಟರಿ ಸಂಸ್ಥೆ ಹೊಂದಿದೆ.

ಪಿ.ಕೆ. ರವಿ ಅವರು ರೋಟರಿ ಸಂಸ್ಥೆಯ ಅಧ್ಯಕ್ಷರಾದ ನಂತರ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ರೋಟರಿ ಸಂಸ್ಥೆಯ ಕಾರ್ಯವನ್ನು ವಿಸ್ತರಿಸಿದ್ದಾರೆ. ನಾಲ್ಕೈದು ಜಿಲ್ಲೆಗಳನ್ನು ಒಳಗೊಂಡ ರೋಟರಿ ಜೋನಲ್ ವ್ಯಾಪ್ತಿಯಲ್ಲಿ ಅತ್ಯುತ್ತಮ ರೋಟರಿ ಸಂಸ್ಥೆ ಎಂಬ ಹೆಗ್ಗಳಿಕೆಗೂ ಸೋಮವಾರಪೇಟೆಯ ರೋಟರಿ ಸಂಸ್ಥೆ ಭಾಜನವಾಗಿದೆ.

ಈ ಮಧ್ಯೆ ಸ್ಥಗಿತಗೊಂಡಿದ್ದ ರೋಟರಿ ಭವನ ನಿರ್ಮಾಣಕ್ಕೆ ರೊಟೇರಿಯನ್ ಬಿ.ಎಸ್. ಸದಾನಂದ್ ಅವರ ಅಧ್ಯಕ್ಷತೆಯಲ್ಲಿ ಮತ್ತೆ ಚಾಲನೆ ನೀಡಿದ್ದು, ಇದೀಗ ಕಾಮಗಾರಿ ಭರದಿಂದ ಸಾಗುತ್ತಿದೆ. ಭವನ ನಿರ್ಮಾಣವಾದ ನಂತರ ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ.

ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸರ್ಕಾರ ಮತ್ತು ದಾನಿಗಳ ನೆರವಿನಿಂದ ರೋಟರಿ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ 45 ಲಕ್ಷದ ಕಾಮಗಾರಿ ನಡೆದಿದೆ. ಮುಂದಿನ ದಿನಗಳಲ್ಲಿ 2 ಅಂತಸ್ತಿನ ಕಟ್ಟಡ ನಿರ್ಮಾಣವಾಗಬೇಕಿದೆ ಎಂದು ಸದಾನಂದ್ ತಿಳಿಸಿದ್ದಾರೆ. -ವಿಜಯ್