ಕೂಡಿಗೆ, ಜೂ. 13: ಕೂಡಿಗೆ ಗ್ರಾಮ ಪಂಚಾಯ್ತಿ ಮೊದಲನೇ ವಾರ್ಡ್ ಮತ್ತು ಕೂಡಿಗೆ ಸರ್ಕಲ್‍ನಲ್ಲಿ ಬೀದಿ ನಾಯಿ ಮತ್ತು ಹುಚ್ಚುನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವಂತೆ ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ವಾರ ಬೀದಿ ನಾಯಿಗಳು ಜಮೀನಿನಲ್ಲಿ ಕಟ್ಟಿದ್ದ ಕರುವನ್ನು ಕಚ್ಚಿ ಗಾಯಗೊಳಿಸಿವೆ. ಅಲ್ಲದೆ, ರಸ್ತೆ ಬದಿಯಲ್ಲಿ ಚಿಕ್ಕ ಮಕ್ಕಳು ಶಾಲೆಗಳಿಗೆ ತೆರಳುವ ಸಂದರ್ಭ ಗಾಯಗೊಳಿಸಿರುವ ಘಟನೆಗಳೂ ನಡೆದಿವೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಸಹ ಯಾವದೇ ಕ್ರಮ ಕೈಗೊಂಡಿಲ್ಲ. ಮಾಸಿಕ ಸಭೆಯಲ್ಲಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸುವ ಬಗ್ಗೆ ಚರ್ಚೆ ನಡೆದಿದ್ದರೂ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ಗ್ರಾ.ಪಂ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರತ್ತ ಗಮನಹರಿಸಿ ಮುಂದೆ ಸಾರ್ವಜನಿಕರಿಗೆ, ಮಕ್ಕಳಿಗೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಈ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.