ಮಡಿಕೇರಿ, ಜೂ. 13: ರಾಜ್ಯ ಸರಕಾರದಿಂದ ಜಿಂದಾಲ್ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಬೆಲೆ ಬಾಳುವ ಭೂಮಿ ನೀಡಿಕೆ ಹಗರಣ ಹಾಗೂ ಐಎಂಎ ಜ್ಯುವೆಲ್ಲರಿ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಪ್ರಕರಣ ಆರೋಪಿ ತಲೆಮರೆಸಿಕೊಳ್ಳಲು ರಾಜಕೀಯ ಮಂದಿಯ ಕೈವಾಡ ಇದೆ ಎಂದು ಆರೋಪಿಸಿ ತಾ. 14ರಂದು (ಇಂದು) ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಬಿಜೆಪಿ ಶಾಸಕರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.

ಈ ಧರಣಿ ಸತ್ಯಾಗ್ರಹದಲ್ಲಿ ಕೊಡಗಿನ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಹಿತ ತಾವು ಪಾಲ್ಗೊಳ್ಳಲಿರುವದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.

ಆ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ತಾ. 14ರಂದು ನಡೆಯಬೇಕಿದ್ದ ಬಿಜೆಪಿಯ ವಿಜಯೋತ್ಸವ ಕೂಡ ಮುಂದೂಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಪ್ರಶ್ನಿಸಿದಾಗ ಈಗ ಏನೂ ಕೇಳಲಾಗದು, ಕಾದುನೋಡಿ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

ಭೂ ಪರಿವರ್ತನೆ ಹೊಸ ಕಾಯ್ದೆಗೆ ಆಗ್ರಹ

ಕೊಡಗು ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ನಿಯಮಗಳನ್ನು ತಿದ್ದುಪಡಿಗೊಳಿಸಿ ಹೊಸ ಕಾಯ್ದೆ ರೂಪಿಸಬೇಕೆಂದೂ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, ಈಗಿನ ಸುತ್ತೋಲೆ ನಿಯಮಗಳ ಪ್ರಕಾರ ಕೊಡಗಿನ ಜನತೆ ಸ್ವಂತ ಮನೆ ನಿರ್ಮಿಸುವದಕ್ಕೂ ಕಾನೂನಿನ ತೊಡಕುಗಳಿವೆ ಎಂದು ಅವರು ಬೊಟ್ಟು ಮಾಡಿದ್ದಾರೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಪ್ರಕಾರ ನದಿ, ಹಳ್ಳಗಳಿಂದ ಕೂಡಿದ 10 ಮೀಟರ್ ಪ್ರದೇಶದಲ್ಲಿ ಅವಕಾಶ ಕಲ್ಪಿಸದಂತೆ ನಿರ್ಬಂಧವಿದ್ದು, ಕೊಡಗಿನಲ್ಲಿ ಅಂತಹ ಪ್ರದೇಶ ಎಲ್ಲಿ ಹುಡುಕಲು ಸಾಧ್ಯವೆಂದು ಬೋಪಯ್ಯ ಪ್ರಶ್ನಿಸಿದ್ದಾರೆ.

ಅಲ್ಲದೆ, 2018ರಲ್ಲಿ ಭೂಕುಸಿತ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಆಕ್ಷೇಪದೊಂದಿಗೆ ಇಳಿಜಾರು ಮತ್ತು ಕಣಿವೆ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆದೇಶವಿದ್ದು, ಇಂತಹ ಆದೇಶವನ್ನು ಸರಕಾರ ತಕ್ಷಣ ಹಿಂಪಡೆದು ಸೂಕ್ತ ತಿದ್ದುಪಡಿಯೊಂದಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.