ಕೂಡಿಗೆ, ಜೂ. 13: ಜೂನ್ ಎರಡನೇ ವಾರವಾದರೂ ಮಳೆಯು ಸ್ಪಲ್ಪ ಪ್ರಮಾಣದಲ್ಲಿ ಸುರಿಯುತ್ತಿರುವದರಿಂದ ಜಿಲ್ಲೆಯ ಏಕೈಕ ಹಾರಂಗಿ ಅಣೆಕಟ್ಟೆಯು ಕೆರೆಯಂತಾಗಿದೆ.
ಹಾರಂಗಿ ಜಲಾಶಯದಿಂದ ಕೊಡಗು ಹಾಗೂ ಅಕ್ಕಪಕ್ಕದ ಜಿಲ್ಲೆಗಳಾದ ಮೈಸೂರು ಮತ್ತು ಹಾಸನ ಗಡಿಭಾಗದ ರೈತರಿಗೆ ಬೇಸಾಯ ಮಾಡಲು ನೀರನ್ನು ಒದಿಸುವದಾಗಿದೆ. ಈಗಾಗಲೇ ಈ ಭಾಗದ ಜಲಾನಯನ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಹಕಾರ ಸಂಘದಿಂದ ಬಿತ್ತನೆ ಬೀಜ ಹಾಗೂ ಭತ್ತವನ್ನು ಖರೀದಿಸಿ ಸಸಿ ಮಡಿಗಳನ್ನು ಮಾಡುವದರಲ್ಲಿ ತಲ್ಲೀನರಾಗಿದ್ದಾರೆ. ಜೂನ್ ಅಂತ್ಯದೊಳಗೆ ಅಥವಾ ಜುಲೈ ಮೊದಲ ವಾರದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾದಲ್ಲಿ ಮಾತ್ರ ನಾಲೆಗಳ ಮೂಲಕ ರೈತರ ಬೇಸಾಯಕ್ಕೆ ನೀರನ್ನು ಒದಗಿಸಲಾಗುತ್ತದೆ. ಆದರೆ, ಇದೀಗ ಮಳೆ ಪ್ರಮಾಣ ಕ್ಷೀಣಗೊಂಡಿದ್ದು, ಜಲಾಶಯದಲ್ಲಿ ನೀರಿಲ್ಲದೆ, ರೈತರಲ್ಲಿ ಆತಂಕ ಉಂಟಾಗಿದೆ.
ಮುಂದಿನ ದಿನಗಳಲ್ಲಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿದಾಗಿ ಅಣೆಕಟ್ಟೆಯು ಬೇಗ ತುಂಬುವ ನಿರೀಕ್ಷೆಯಲ್ಲಿ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಬೇಸಾಯ ಮಾಡಲು ತೊಡಗಿದ್ದಾರೆ.
ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ 2805.01 ಅಡಿಯಿದ್ದು, ಕಳೆದ ವರ್ಷ ಇದೇ ಅವಧಿಗೆ 2815.30 ಅಡಿ ಇತ್ತು. ಜಲಾಶಯಕ್ಕೆ ಇಂದು 160 ಕ್ಯೂಸೆಕ್ಸ್ ಒಳ ಹರಿವು ಇದ್ದು, ಕಳೆದ ವರ್ಷ ಇದೇ ಅವಧಿಗೆ 7260 ಕ್ಯೂಸೆಕ್ ಇತ್ತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.