ಮಡಿಕೇರಿ, ಜೂ. 13: ಎಲ್ಲರಿಗೂ ತಿಳಿದಿರುವಂತೆ ಜಿಲ್ಲಾಡಳಿತವು ಈ ಬಾರಿಯ ಮುಂಗಾರು ಮಳೆಯಿಂದಾಗಿ ಸಂಭವಿಸಬಹುದಾದ ಜೀವಹಾನಿ ಮತ್ತು ಪ್ರಾಣಹಾನಿಯನ್ನು ತಡೆಯಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವದೇ ರೀತಿಯ ಅನಾಹುತ ಎದುರಿಸಲು ಸನ್ನದ್ದಗೊಳ್ಳುತ್ತಿದೆ.

ಜಿಲ್ಲಾಡಳಿತ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಜೊತೆಯಾಗಿ ಸಿದ್ಧ್ದತೆ ಮಾಡಿಕೊಳ್ಳಬೇಕೆಂಬುದು ಜಿಲ್ಲಾಡಳಿತದ ಆಶಯ. ಈ ನಿಟ್ಟಿನಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ತಾ. 14 ರಂದು (ಇಂದು) ಬೆಳಗ್ಗೆ 9.30 ಗಂಟೆಯಿಂದ ಸಂಜೆ 4.30 ರವರೆಗೆ ‘ಒಂದು ದಿನದ ಸವಾಲುಗಳು ಮತ್ತು ಮುಂದಿನ ದಾರಿ’ ಎಂಬ ಕಾರ್ಯಾಗಾರ ಆಯೋಜಿಸಲಾಗಿದೆ.

ಕಳೆದ ಬಾರಿ ವಿಕೋಪದ ಸಂದರ್ಭದಲ್ಲಿ ತೊಡಗಿಸಿಕೊಂಡ ಎಲ್ಲಾ ಸಂಘ ಸಂಸ್ಥೆಗಳು ಈ ಕಾರ್ಯಾಗಾರಕ್ಕೆ ನೋಂದಣಿ ಮಾಡಿಕೊಂಡು ಚರ್ಚೆಯಲ್ಲಿ ಭಾಗವಹಿಸಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯ ತಯಾರಿಯಲ್ಲಿ ಭಾಗಿಯಾಗಬೇಕೆಂದು ಜಿಲ್ಲಾಡಳಿತ ಕೋರಿದೆ.