ಮಡಿಕೇರಿ, ಜೂ. 13: ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಮಕ್ಕಂದೂರು ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿಗೆ ಸಂತ್ರಸ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು. ವಿಕೋಪ ಘಟಿಸಿ 10 ತಿಂಗಳು ಕಳೆದರೂ ಕೂಡ ಸಂತ್ರಸ್ತರಿಗೆ ಇನ್ನೂ ಒಂದು ಮನೆಯನ್ನೂ ಹಸ್ತಾಂತರಿಸಿಲ್ಲ. ಪರಿಹಾರ ಹಣವೂ ಕೈಸೇರಿಲ್ಲ. ಮನೆ ಕಳೆದು ಕೊಂಡವರ ಹೆಸರುಗಳನ್ನು ಪಟ್ಟಿಯಿಂದಲೇ ಕೈಬಿಡಲಾಗಿದೆ. ಹೀಗಿದ್ದರೂ ಕೂಡ ಜಿಲ್ಲಾಡಳಿತ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಗೆಡವಿದರು. ಇದೀಗ ಮತ್ತೊಂದು ಮಳೆಗಾಲ ಆರಂಭವಾಗಿದ್ದು, ಅಧಿಕಾರಿಗಳು ಮಾತ್ರ ಸಂತ್ರಸ್ತರನ್ನು ಗೊಂದಲದಲ್ಲೇ ಉಳಿಸಿದ್ದಾರೆ ಎಂದು ಸಂತ್ರಸ್ತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವೇರಮ್ಮ ಹರೀಶ್ ಅಧ್ಯಕ್ಷತೆಯಲ್ಲಿ ಮಕ್ಕಂದೂರು ವಿಎಸ್ಎಸ್ಎನ್ ಸಭಾಂಗಣದಲ್ಲಿ ಗ್ರಾಮ ಸಭೆ ಆಯೋಜಿಸಲಾಗಿತ್ತು. ವಿಕೋಪ ಸಂಭವಿಸಿ 10 ತಿಂಗಳ ಬಳಿಕ ನಡೆದ ಗ್ರಾಮ ಸಭೆಗೆ ಮಡಿಕೇರಿ ತಾಲೂಕು ಮಟ್ಟದ ಕೆಳ ಹಂತದ ಅಧಿಕಾರಿಗಳು ಮಾತ್ರ ಹಾಜರಾಗಿದ್ದರು. ಗ್ರಾಮ ಸಭೆಯಲ್ಲಿ ಸಂತ್ರಸ್ತರ ಸಮಸ್ಯೆಗಳಿಗೆ ಉತ್ತರಿಸಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳ ಬಳಿಕ ಮತ್ತೊಂದು ವಿಶೇಷ ಗ್ರಾಮ ಸಭೆ ಆಯೋಜಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಭೆಗೆ ಕರೆಯಿಸಿ, ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಸಂತ್ರಸ್ತ
(ಮೊದಲ ಪುಟದಿಂದ) ರವಿ ಕುಶಾಲಪ್ಪ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ಕಾಫಿ ತೋಟಗಳು, ಹೋಂಸ್ಟೇಗಳು ಕಾರಣವೆಂದು ಹೇಳಿಕೆ ನೀಡಲಾಗುತ್ತಿದೆ. ಹಾರಂಗಿ ಜಲಾಶಯದಿಂದ ಜಳಪ್ರಳಯವಾಗಿದೆ ಎಂಬವದು ಕೂಡ ಸತ್ಯ. ಆದರೆ, ಸರಕಾರ ಮತ್ತು ವಿಜ್ಞಾನಿಗಳು ಮಾತ್ರ ವಿಕೋಪಕ್ಕೆ ನಿಖರ ಕಾರಣ ಏನೆಂದು ತಿಳಿಸದೇ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು. ಭಾಷೆ ಬಾರದ ವಿಜ್ಞಾನಿಗಳು ಜಲಪ್ರಳಯವಾದ ಕಡೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳು ಪ್ರಕೃತಿ ವಿಕೋಪ ಸಂಭವಿಸಿದ ಗ್ರಾಮಗಳಿಗೆ ಭೇಟಿ ನೀಡುವ ಸಂದರ್ಭ ಆಯಾ ಪಂಚಾಯಿತಿಗಳಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಮನೆ ಕಳೆದುಕೊಂಡವರಿಗೆ ಇಂದಿಗೂ ಒಂದು ಮನೆಯನ್ನು ನೀಡಿಲ್ಲ. ಹಾನಿಗೆ ತುತ್ತಾದ ಮನೆಗಳು ವಾಸಿಸಲು ಯೋಗ್ಯವಾಗಿಲ್ಲ, ಆದರೂ ಅಂತಹವರಿಗೆ ಮನೆಗಳನ್ನು ನೀಡುತ್ತಿಲ್ಲ. ಅವರ ಹೆಸರನ್ನೂ ಕೂಡ ಪಟ್ಟಿಗೆ ಸೇರಿಸಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಂದೂರು ವ್ಯಾಪ್ತಿಯಲ್ಲಿ 330ಕ್ಕೂ ಹೆಚ್ಚು ಮನೆಗಳು ನಾಶವಾಗಿರುವ ಬಗ್ಗೆ ಪಂಚಾಯಿತಿಯಲ್ಲಿ ಮಾಹಿತಿ ಇದೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಬೆರಳೆಣಿಕೆ ಮನೆಗಳ ಲೆಕ್ಕ ಹೇಳುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಸಂತ್ರಸ್ತರು ಎಂತಹ ಸೇವೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂತ್ರಸ್ತರನ್ನು ಭಿಕ್ಷುಕರಂತೆ ಕಾಣುತ್ತಿರುವ ಅಧಿಕಾರಿಗಳು ಮತ್ತು ಸರಕಾರದ ವಿರುದ್ಧ ಹೋರಾಟ ನಡೆಸಲು ಸಿದ್ಧ. ಆದರೆ ಶಾಂತಿಯುತವಾಗಿ ಸಮಸ್ಯೆ ಬಗೆಹರಿಯುವ ಉದ್ದೇಶದಿಂದ ಸಹನೆಯಿಂದ ಸಂತ್ರಸ್ತರು ಕಾಯುತ್ತಿದ್ದಾರೆ. ಇದನ್ನು ಸರಕಾರ ಮತ್ತು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ರವಿ ಕುಶಾಲಪ್ಪ ಸಲಹೆ ನೀಡಿದರು.
ನಾಪಂಡ ರವಿ ಕಾಳಪ್ಪ ಮಾತನಾಡಿ, ಗ್ರಾಮಸಭೆಗೆ ತಾಲೂಕು ಮಟ್ಟದ ಕೆಳ ಹಂತದ ಅಧಿಕಾರಿಗಳನ್ನು ಕಳುಹಿಸಿ ಸಂತ್ರಸ್ತ ಗ್ರಾಮಸ್ಥರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಈ ಅಧಿಕಾರಿಗಳಿಗೆ ಪ್ರಕೃತಿ ವಿಕೋಪ, ಪರಿಹಾರ, ಪುನರ್ವಸತಿ ಸೇರಿದಂತೆ ಯಾವದರ ಬಗ್ಗೆಯೂ ಮಾಹಿತಿಯೇ ಇಲ್ಲ ಎಂದು ಕಂದಾಯ, ಅರಣ್ಯ, ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆಯಿಸಿ ಸಭೆ ನಡೆಸಿದರೆ ಮಾತ್ರವೇ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹೀಗಾಗಿ 10 ದಿನಗಳಲ್ಲಿ ಮತ್ತೊಂದು ವಿಶೇಷ ಗ್ರಾಮ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಸರ್ವರೂ ಸಮ್ಮತಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಯಿತು.
ನೋಟೀಸ್-ಸ್ಪಷ್ಟನೆ: ಮಕ್ಕಂದೂರು ವ್ಯಾಪ್ತಿಯಲ್ಲಿ ಹೋಂಸ್ಟೇಗಳಿಗೆ ಪ್ರವಾಸಿಗರು ಬರಬಾರದೆಂದು ಪಿಡಿಓ ನೀಡಿರುವ ಆದೇಶ ಸರಿಯಲ್ಲ. ಇದನ್ನೇ ನಂಬಿಕೊಂಡು ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಂದೂರು ಇಂದಿಗೂ ಸುರಕ್ಷಿತವಾಗಿದ್ದು, ಇಲ್ಲಿಯೂ ಜನರು ಬದುಕುತ್ತಿದ್ದಾರೆ. ಆದರೆ ಪಂಚಾಯಿತಿ ಅಧಿಕಾರಿಗಳು ಮಾತ್ರ ಪ್ರಚಾರ ಪಡೆಯಲು ಮಕ್ಕಂದೂರು ಅಸುರಕ್ಷಿತ ಎಂದು ಪತ್ರಿಕಾ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಪ್ರವಾಸೋದ್ಯಮಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ನಾಪಂಡ ರವಿ ಕಾಳಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಚಂಗಪ್ಪ, ಗ್ರಾಮ ಸಭೆಯ ನಿರ್ಣಯದಂತೆ ಆದೇಶ ಮಾಡಲಾಗಿದೆ. ಇದರಲ್ಲಿ ನನ್ನ ವೈಯಕ್ತಿಕ ಉದ್ದೇಶಗಳಿಲ್ಲ ಎಂದು ಸ್ಪಷ್ಟನೆ ನೀಡಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ ರವಿ ಕುಶಾಲಪ್ಪ, ಮಕ್ಕಂದೂರು ಹೋಂಸ್ಟೇ ಅಸೋಸಿಯೇಶನ್ ಅವರೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ಮಾಡಬಹುದಿತ್ತು. ಪಂಚಾಯಿತಿ ಏಕಾಏಕಿ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ. ಪಂಚಾಯಿತಿ ಅಧಿಕಾರ ದುರ್ಬಳಕೆ ಆಗಬಾರದು ಎಂದು ಸಲಹೆ ನೀಡಿದರು. ಮಕ್ಕಂದೂರು ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ರೆಸಾರ್ಟ್ಗಳಿಗೆ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಬಾರದೆಂದು ರವಿಕಾಳಪ್ಪ ಒತ್ತಾಯಿಸಿದರು. 20 ರಿಂದ 40 ಸೆಂಟ್ ಸೈಟ್ಗಳ ಭೂ ಪರಿವರ್ತನೆಗೆ ಪಂಚಾಯಿತಿ ಅಡ್ಡಿ ಮಾಡಬಾರದೆಂದು ಆಗ್ರಹಿಸಿದರು.
ಸೀಮೆಎಣ್ಣೆ ಕೊಡಿ: ಮಳೆಗಾಲ ಪ್ರಾರಂಭವಾಗಿದ್ದರೂ ಕೂಡ ಗ್ರಾಮೀಣ ಭಾಗದ ಜನರಿಗೆ ಸೀಮೆಎಣ್ಣೆ ನೀಡಿಲ್ಲ. ತಕ್ಷಣವೇ ಸೀಮೆಎಣ್ಣೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರವಿ ಕುಶಾಲಪ್ಪ, ರವಿ ಕಾಳಪ್ಪ ಸೇರಿದಂತೆ ಸಂತ್ರಸ್ತರು ಒತ್ತಾಯಿಸಿದರು. ಮಳೆಗಾಲ ಕರೆಂಟ್ ಕೂಡ ಕೈಕೊಡುತ್ತದೆ. ಇಂತಹ ಸಂದರ್ಭ ಸೀಮೆಎಣ್ಣೆ ದೀಪಗಳೇ ಆಸರೆ. ತಕ್ಷಣವೇ ಬಿಪಿಲ್ ಮತ್ತು ಎಪಿಲ್ ಕಾರ್ಡುದಾರರಿಗೂ ತಿಂಗಳಿಗೆ ತಲಾ 5 ಲೀ. ಸೀಮೆಎಣ್ಣೆ ವಿತರಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿ ಈ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಇಲಾಖೆ ವತಿಯಿಂದ ಪಡಿತರ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ತ ಗ್ರಾಮಸ್ಥರಿಗೆ ಮೊದಲ ಆದ್ಯತೆಯಲ್ಲಿ ಕಾರ್ಡು ವಿತರಿಸಲಾಗುತ್ತಿದೆ ಎಂದು ಹೇಳಿದರು. ಮಕ್ಕಂದೂರು ವ್ಯಾಪ್ತಿಯ ಜನರಿಗೆ ಇಲ್ಲಿನ ವಿಎಸ್ಎಸ್ಎನ್ನಲ್ಲಿಯೇ ಪಡಿತರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ರವಿ ಕಾಳಪ್ಪ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಎಸ್ಎಸ್ಎನ್ ಸದಸ್ಯ ಸತೀಶ್, ಈ ಕುರಿತು ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಆಹಾರ ಇಲಾಖೆ ಅನುಮತಿ ನೀಡಿದರೆ ಪಡಿತರ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು. ಗ್ರಾಮಸಭೆಯಲ್ಲಿ ಮನೆ, ಪರಿಹಾರ, ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು. ಆದರೆ ಕೆಳ ಮಟ್ಟದ ಅಧಿಕಾರಿಗಳಿಂದ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿ, ಮುಂದಿನ 10 ದಿನಗಳ ಬಳಿಕ ಮತ್ತೊಂದು ಸಭೆ ನಡೆಸಲು ನಿರ್ಣಯ ಕೈಗೊಂಡು ಸಭೆಯನ್ನು ಮುಂದೂಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಯಾಲದಾಳು ಪದ್ಮಾವತಿ, ತಾಲೂಕು ಪಂಚಾಯಿತಿ ಸದಸ್ಯ ರಾಯ್ ತಮ್ಮಯ್ಯ ಸೇರಿದಂತೆ ಇತರರು ಹಾಜರಿದ್ದರು.