ಮಡಿಕೇರಿ, ಜೂ. 13: ಕಳೆದ ವರ್ಷದ ಮುಂಗಾರುವಿನಲ್ಲಿ ಎದುರಾಗಿದ್ದ ಪ್ರಾಕೃತಿಕ ವಿಕೋಪ ಅನಾಹುತಗಳಿಗೆ ಸಂಬಂಧಿಸಿದಂತೆ; ಅಗತ್ಯ ಕ್ರಮ ವಹಿಸಲು ಕರ್ನಾಟಕದ ಕೇಂದ್ರ ಸಚಿವರೊಂದಿಗೆ ಸಭೆಯೊಂದನ್ನು ಕರೆದು ಚರ್ಚಿಸುವಂತೆ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಪತ್ರ ಬರೆದಿದ್ದಾರೆ.ಇದೇ ತಾ. 10ರಂದು ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿರುವ ಸಚಿವ ಸದಾನಂದ ಗೌಡ, ಕಳೆದ 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಆಗಿರುವ ಅನಾಹುತಗಳಿಗೆ ಸಂಬಂಧಿಸಿದಂತೆ, ಜಮೀನು, ಮನೆ ಮತ್ತು ಜಾನುವಾರುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಬಿಡುಗಡೆಯಾದ ಅನುದಾನದಲ್ಲಿ ಈಗಾಗಲೇ ವಿತರಿಸಿರುವ ಮೂಲಭೂತ ಸೌಕರ್ಯಗಳು ಹಾಗೂ ಮನೆಗಳ ನಿರ್ಮಾಣದ ಕಾಮಗಾರಿಗಳ ಪ್ರಗತಿ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳು, ಫಲಾನುಭವಿಗಳಿಗೆ ವಿತರಿಸಲಾಗಿರುವ ಸೌಲಭ್ಯಗಳ ಪೂರ್ಣ ಮಾಹಿತಿಯನ್ನು ಒದಗಿಸುವಂತೆ ಕೋರಿದ್ದಾರೆ.
ಮುಂದುವರಿದು, ಈ ಸಂಬಂಧ ಕೇಂದ್ರ ಸರಕಾರದಿಂದ ಪಡೆಯಬಹುದಾದ ಅನುದಾನ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲು ತಮ್ಮ ಹಂತದಲ್ಲಿ ರಾಜ್ಯದ ಕೇಂದ್ರ ಸಚಿವರ ಸಭೆಯನ್ನು ಕರೆಯಲು ದಿನಾಂಕವನ್ನು ಗೊತ್ತುಪಡಿಸುವಂತೆಯೂ ಅವರು ಪತ್ರದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.