ಗೋಣಿಕೊಪ್ಪಲು, ಜೂ.13: ಕೊಡಗಿನಲ್ಲಿ ಮುಂಗಾರು ಪ್ರಾರಂಭಗೊಂಡಿದ್ದು ದ.ಕೊಡಗಿನ ವಿವಿಧ ಭಾಗದಲ್ಲಿ ಮಳೆಗಾಳಿಗೆ ಮನೆ ಕುಸಿತ,ವಿದ್ಯುತ್ ಕಂಬ ಕುಸಿತಗಳು ಕಂಡು ಬಂದಿದ್ದು ದ.ಕೊಡಗಿನ ತಿತಿಮತಿ, ಬಾಳೆಲೆ, ಶ್ರೀಮಂಗಲ, ಹುದಿಕೇರಿ, ಕುಟ್ಟ, ಗೋಣಿಕೊಪ್ಪ, ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಿದ್ಯುತ್ ಸಂಚಾರ ಕಡಿತಗೊಂಡಿದೆ. ಚೆಸ್ಕಾಂನ ಸಿಬ್ಬಂದಿ ಸುರಿಯುತ್ತಿರುವ ಮಳೆಯ ನಡುವೆ ಕೆಲಸ ನಿರ್ವಹಿಸುತ್ತಿದ್ದರೂ, ಸಕಾಲದಲ್ಲಿ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ. ಹೊಟೇಲ್ ಉದ್ಯಮಕ್ಕೆ ಇದರಿಂದ ಭಾರಿ ಪೆಟ್ಟು ಬಿದ್ದಿದೆ.ಗೋಣಿಕೊಪ್ಪ ಪಂಚಾಯ್ತಿ ವ್ಯಾಪ್ತಿಯ ಆರನೇ ವಾರ್ಡ್ನ ಕಾವೇರಿ ಹಿಲ್ಸ್ ಬಡಾವಣೆಗೆ ತೆರಳುವ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಸುರಿದ ಮಳೆಯಿಂದ ಸಾರ್ವಜನಿಕರಿಗೆ ನಡೆದಾಡುವದೇ ಕಷ್ಟವಾಗಿದೆ.ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಪಟ್ಟಣದತ್ತ ಜನ ಸಂಚಾರ ಸಹಜವಾಗಿಯೇ ಕಡಿಮೆ ಯಾಗಿದೆ. ನಗರದಲ್ಲಿರುವ ಮೊಬೈಲ್ ಅಂಗಡಿಗಳಿಗೆ ತಮ್ಮ ಮೊಬೈಲ್ಗಳನ್ನು ಚಾರ್ಜ್ ಮಾಡಿಕೊಳ್ಳಲು ಗ್ರಾಮೀಣ ಭಾಗದಿಂದ ಜನತೆ ಆಗಮಿಸುತ್ತಿದ್ದಾರೆ. ಅಲ್ಲಲ್ಲಿ ರಸ್ತೆ ಬದಿಯ ಮರಗಳು ಧರೆಗೆ ಉರುಳಿದ್ದು ಬಸ್ ಸಂಚಾರ ದಲ್ಲೂ ವ್ಯತ್ಯಯ ಉಂಟಾಗಿದೆ. ಮಳೆಯ ನಡುವೆ ಹೊರ ಜಿಲ್ಲೆಯಿಂದ ನಗರಕ್ಕೆ ಆಗಮಿಸುವ ರೈತರು ತಾವು ಬೆಳೆದಿರುವ ತರಕಾರಿ, ಸೊಪ್ಪುಗಳನ್ನು ಮಳೆಯಲ್ಲಿಯೇ
(ಮೊದಲ ಪುಟದಿಂದ) ವ್ಯಾಪಾರ ಮಾಡುತ್ತಿದ್ದಾರೆ. ನಗರದಲ್ಲಿರುವ ಎಟಿಎಂ ಕೇಂದ್ರಗಳು ವಿದ್ಯುತ್ ಇಲ್ಲದೆ ಸಂಪರ್ಕ ಕಡಿದುಕೊಂಡಿದೆ. ಗ್ರಾಹಕರು ಎಟಿಎಂನಿಂದ ಹಣ ಪಡೆಯಲಾಗದೆ ಪರದಾಡುತ್ತಿದ್ದಾರೆ.
ಗೋಣಿಕೊಪ್ಪಲುವಿನ ಚೆಸ್ಕಾಂ ಕೇಂದ್ರ ಕಚೇರಿಗೆ ಒಳಪಡುವ ಪ್ರದೇಶಗಳಲ್ಲಿ 70 ವಿದ್ಯುತ್ ಕಂಬಗಳು ಗಾಳಿ ಮಳೆಗೆ ಧರೆಗೆ ಉರುಳಿವೆ. 63 ಕೆವಿಯ 9 ಟ್ರಾನ್ಸ್ಫಾರ್ಮ್, 100 ಕೆವಿಯ 6 ಟ್ರಾನ್ಸ್ಫಾರ್ಮ್, 25 ಕೆವಿಯ 4ಟ್ರಾನ್ಸ್ ಫಾರ್ಮ್ ಸಿಡಿಲಿಗೆ ಹಾಳಾಗಿದ್ದು ಬದಲಿ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದಾರೆ. ಲಭ್ಯವಿರುವ ಸಿಬ್ಬಂದಿಗಳ ಸಹಕಾರದಿಂದ ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿರುವ ಚೆಸ್ಕಾಂ ಸಿಬ್ಬಂದಿಗಳು ಗಾಳಿ, ಮಳೆಯ ನಡುವೆ, ಗ್ರಾಹಕರಿಗೆ ವಿದ್ಯುತ್ ನೀಡಲು ಹರ ಸಾಹಸ ಪಡುತ್ತಿದ್ದಾರೆ. ಒಂದು ಬದಿಯಿಂದ ಕೆಲಸ ನಿರ್ವಹಿಸಿ ವಿದ್ಯುತ್ ಸಂಪರ್ಕ ನೀಡುತ್ತಿದ್ದಂತೆಯೇ ಮತ್ತೊಂದು ಬದಿಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳುತ್ತಿರುವದರಿಂದ ಸಕಾಲದಲ್ಲಿ ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ತೊಂದರೆ ಉಂಟಾಗುತ್ತಿದೆ.
ಬಿರುನಾಣಿ, ತೆರಾಲು, ಕುಟ್ಟ, ಮಂಚಳ್ಳಿ, ವಡ್ಡರಮಾಡು, ಕಾನೂರು, ನಿಟ್ಟೂರು, ಮಾಯಮುಡಿ, ಮತ್ತೂರು, ಭಾಗಗಳಲ್ಲಿ 180ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾಳಾಗಿದ್ದು ಏಳು ಟ್ರಾನ್ಸ್ಫಾರ್ಮ್ಗಳು ಕೆಟ್ಟು ಹೋಗಿವೆ. ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲಾಗುತ್ತಿದ್ದು ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. ವೀರಾಜಪೇಟೆ ತಾಲೂಕಿನ ಚೆಸ್ಕಾಂ ಎಇಇ ಅಂಕಯ್ಯ ಸೇರಿದಂತೆ ಚೆಸ್ಕಾಂನ ಸಹಾಯಕ ಇಂಜಿನಿಯರ್ಗಳಾದ ಗೋಣಿಕೊಪ್ಪಲುವಿನ ಕೃಷ್ಣಕುಮಾರ್ ಶ್ರೀಮಂಗಲದ ವಿಜಯ ಕುಮಾರ್, ಬಾಳೆಲೆಯ ಮನುಕುಮಾರ್, ತಮ್ಮ ಸಿಬ್ಬಂದಿ ಸಹಕಾರ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ.
ತಿತಿಮತಿ ಸಮೀಪ ಕರಡಿಕೊಪ್ಪದ ಸುಕುಮಾರ್ ಮನೆ ಮೇಲೆ ಮರ ಬಿದ್ದ ಪರಿಣಾಮ ಅಡಿಗೆ ಕೋಣೆ ಹಾಗೂ ಇನ್ನಿತರ ಕೊಠಡಿಗಳಿಗೆ ಹಾನಿ ಉಂಟಾಗಿದೆ. ಗೋಣಿಕೊಪ್ಪ ಸಮೀಪದ ಒಂದನೇ ವಿಭಾಗದ ಪ್ರವೀಣ್ ಪೂಜಾರಿ ಅವರ ಮನೆಯ ಸಮೀಪ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. -ಹೆಚ್.ಕೆ. ಜಗದೀಶ್