ಕೂಡಿಗೆ, ಜೂ. 13: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಶಂಭುಲಿಂಗೇಶ್ವರ ದೇವಾಲಯಕ್ಕೆ ಸೇರಿದ ಜಾಗದ ಕಡತಗಳನ್ನು ಕಳೆದ ಐದು ವರ್ಷಗಳಿಂದ ಪರಿಶೀಲಿಸದೆ ಅದರ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ಮಾಡಿರುವದನ್ನು ಖಂಡಿಸಿ ಕಂದಾಯ ಇಲಾಖೆಯ ಕಛೇರಿ ಎದುರು ಪ್ರತಿಭಟನೆ ಮಾಡಲು ಶಂಭುಲಿಂಗೇಶ್ವರ ದೇವಾಲಯ ಸಮಿತಿಯು ನಿರ್ಧರಿಸಿದೆ.
ಐದು ವರ್ಷಗಳಿಂದಲೂ ಕಂದಾಯ ಇಲಾಖೆಯ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳು ಸೋಮವಾರಪೇಟೆಯಿಂದ ಮಡಿಕೇರಿಗೆ, ಮಡಿಕೇರಿಯಿಂದ ಸೋಮವಾರಪೇಟೆಗೆ ಕಡತ ಹೋಗಿದೆ ಎಂಬ ನೆಪವೊಡ್ಡುತ್ತಾ ಜಾಗ ಮಂಜೂರಾತಿ ಮಾಡದೆ ಇದೀಗ ರದ್ದುಗೊಂಡಿದೆ ಎಂದು ಕುಶಾಲನಗರದ ನಾಡಕಛೇರಿಯಲ್ಲಿ ಸಮಿತಿಯವರಿಗೆ ತಿಳಿಸಿದ್ದಾರೆ. ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಚಿಕ್ಕತ್ತೂರು ಗ್ರಾಮದ ಸರ್ವೇ ನಂ.4/1ರಲ್ಲಿ ಕಳೆದ ಐದು ವರ್ಷಗಳ ಹಿಂದೆ 1 ಎಕರೆ ಜಾಗವನ್ನು ದೇವಾಲಯಕ್ಕಾಗಿ ಕಂದಾಯ ಇಲಾಖೆಯ ವತಿಯಿಂದ ಗುರುತಿಸಲಾಗಿದೆ. ಆದರೆ ಎರಡು ಬಾರಿ ಸರ್ವೆ ಇಲಾಖೆಯ ವತಿಯಿಂದ ಸಮೀಪದಲ್ಲಿರುವ ಅರಣ್ಯ ಇಲಾಖೆಯ ಜಾಗವನ್ನು ಬಿಟ್ಟು ಸರ್ವೆ ಮಾಡಿ ಜಾಗವನ್ನು ಗುರುತಿಸಲಾಗಿದ್ದರೂ ಮಂಜೂರಾತಿಗೆ ಸಂಬಂಧಪಟ್ಟ ಕಡತಗಳನ್ನು ಸಮರ್ಪಕವಾಗಿ ಒದಗಿಸಿದ್ದರೂ, ಅಧಿಕಾರಿಗಳು ಈ ಜಾಗವನ್ನು ಶಂಭುಲಿಂಗೇಶ್ವರ ದೇವಾಲಯಕ್ಕೆ ಮಾಡಲು ಬರುವದಿಲ್ಲ ಎಂದು ತಿರಸ್ಕರಿಸಿದ್ದಾರೆ.
ಕಂದಾಯ ಇಲಾಖೆಯವರು ಮಂಜೂರಾತಿಗಾಗಿ ಚಿಕ್ಕತ್ತೂರು ಗ್ರಾಮದ ದೇವಾಲಯದ ಟ್ರಸ್ಟ್ ನೊಂದಾವಣಿ ಮಾಡಲು ತಿಳಿಸಿದರನ್ವಯ ಕ್ಷೇತ್ರದ ಶಾಸಕರ ಆದೇಶದಂತೆ ಟ್ರಸ್ಟ್ ರಚಿಸಿ ಎರಡು ವರ್ಷಗಳೇ ಕಳೆದರೂ ಈ ಜಾಗವನ್ನು ಮಂಜೂರಾತಿ ಮಾಡಿಲ್ಲ. ಆದ್ದರಿಂದ ಶಂಭುಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ.ಭೋಗಪ್ಪ, ಕಾರ್ಯದರ್ಶಿ ರವಿ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಗ್ರಾ.ಪಂ. ಸದಸ್ಯ ಮಂಜು, ಸಮಿತಿಯ ನಿರ್ದೇಶಕರಾದ ಕೃಷ್ಣ, ಆನಂದ್, ಗುಜೇಂದ್ರ, ರಂಗೇಗೌಡ, ಪ್ರಭಾಕರ್, ಕುಮಾರಸ್ವಾಮಿ, ರವಿ ಸೇರಿದಂತೆ ಗ್ರಾಮಸ್ಥರು ಕಂದಾಯ ಇಲಾಖೆಯ ಕಛೇರಿಯ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.