ಕುಶಾಲನಗರ, ಜೂ 13: ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ದುರ್ಘಟನೆ ಇಂದು ಮಧ್ಯಾಹ್ನ ನಡೆದಿದೆ.ಪಿರಿಯಾಪಟ್ಟಣದಿಂದ ಅಲ್ಟೋ ಕಾರಿನಲ್ಲಿ ಕಾರ್ಯನಿಮಿತ್ತ ಮಡಿಕೇರಿ ಕಡೆಗೆ (ಕೆಎ.03.ಎಂ.ಎಲ್.4287) ತೆರಳುತ್ತಿದ್ದ ಒಂದೇ ಕುಟುಂಬದ ಇಬ್ಬರು ಸದಸ್ಯರು ಮೃತಪಟ್ಟಿದ್ದು ಪಿರಿಯಾಪಟ್ಟಣ ತಾಲೂಕಿನ ಮೆಲ್ಲಳ್ಳಿ ಗ್ರಾಮದ ಸತೀಶ್ (42) ಮತ್ತು ಜ್ಯೋತಿ (36) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಆಗಮಿಸುತ್ತಿದ್ದ ಬೇರೊಂದು (ಮೊದಲ ಪುಟದಿಂದ) ಕಾರು (ಕೆಎ 41 ಎನ್ 8151) ವೇಗವಾಗಿ ಬಂದು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಅಲ್ಟೋ ಕಾರು ರಸ್ತೆಯಿಂದ ಕಾಡಿನ ಅಂಚಿಗೆ ಎಸೆಯಲ್ಪಟ್ಟು ಕಾರಿನಲ್ಲಿದ್ದ ಸತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತನ ಸಹೋದರಿ ಜ್ಯೋತಿ ತೀವ್ರ ಗಾಯಗೊಂಡು ಕುಶಾಲನಗರ ಸರಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಮೃತಪಟ್ಟಿದ್ದಾರೆ.

ಮಡಿಕೇರಿ ಕಡೆಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಬೆಂಗಳೂರಿನ ದೀಪಕ್ ಮತ್ತು ರಿತಿಕಾ ಎಂಬ ಯುವತಿಗೆ ಅಲ್ಪಸ್ವಲ್ಪ ಗಾಯ ಉಂಟಾಗಿದೆ. ಮೃತ ಸತೀಶ್ ಮತ್ತು ಆತನ ಸಹೋದರಿ ಜ್ಯೋತಿ ಮಡಿಕೇರಿಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕಂಡ ಹೊಸಕೋಟೆಯ ದಾಸಂಡ ರಮೇಶ್, ದಾಸಂಡ ಜಗದೀಶ್ ಮತ್ತು ಸಲೀಂ, ಜುಬೇರ್ ಎಂಬವರು ಕಾರಿನಿಂದ ದೇಹಗಳನ್ನು ಹೊರತೆಗೆದು ಕುಶಾಲನಗರ ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮರೆದಿದ್ದಾರೆ. ಈ ನಡುವೆ ನೂರಾರು ಸಂಖ್ಯೆಯ ದಾರಿಹೋಕರು ಘಟನೆಯ ಮೊಬೈಲ್ ಚಿತ್ರೀಕರಣ ಮಾಡುತ್ತಿದ್ದರೆ ಹೊರತು ಗಾಯಾಳುಗಳ ಸಹಾಯಕ್ಕೆ ಧಾವಿಸದಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಮೃತ ಸತೀಶ್ ಮತ್ತು ಜ್ಯೋತಿ ಮೆಲ್ಲೇನಹಳ್ಳಿಯ ಶಿವಲಿಂಗೇಗೌಡ ಅವರ ಮಕ್ಕಳಾಗಿದ್ದು ಕೃಷಿಕ ಸತೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದರೆ, ಜ್ಯೋತಿ ಓರ್ವ ಪುತ್ರಿಯನ್ನು ಅಗಲಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ವಿಷಯ ತಿಳಿದ ಕುಶಾಲನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.