ಕುಶಾಲನಗರ, ಜೂ 12: ಕುಶಾಲನಗರ ವ್ಯಾಪ್ತಿಯ ಆನೆಕಾಡು, ದುಬಾರೆ ಉಪ ಅರಣ್ಯ ವಲಯಗಳಲ್ಲಿ 40 ಸಾವಿರ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಅವರ ನೇತೃತ್ವದಲ್ಲಿ ಈಗಾಗಲೆ ದುಬಾರೆ ಸಾಕಾನೆ ಶಿಬಿರದಲ್ಲಿ 300 ಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ದುಬಾರೆ ರಕ್ಷಿತಾರಣ್ಯದಲ್ಲಿ ಕಾಡು ಮರಗಳ ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಬಸವನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ 300 ನೆರಳು ಗಿಡಗಳನ್ನು ನೆಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.